ಕಸಾರ್(ಅಸ್ಸಾಂ) ಕೊರೊನಾ ಬಿಕ್ಕಟ್ಟು ಇಡೀ ದೇಶವನ್ನೇ ಬೆಚ್ಚಿಬೀಳಿಸಿರುವ ಈ ಸಂದರ್ಭಗಳಲ್ಲಿ ಅಧಿಕಾರಿಗಳ ಪಾತ್ರ ಮಹತ್ವದ್ದು.
ಇದೇ ಸಮಯದಲ್ಲಿ ಮದುವೆ ನಿಶ್ಚಯವಾಗಿದ್ದರೂ, ತಮ್ಮ ವಿವಾಹಕ್ಕೆ ಕನಿಷ್ಠ ಒಂದು ದಿನದ ರಜೆಯನ್ನು ತೆಗೆದುಕೊಳ್ಳದೆ ಜಿಲ್ಲಾಧಿಕಾರಿಯೊಬ್ಬರು ಮಾದರಿಯಾಗಿದ್ದಾರೆ.
ಅಸ್ಸಾಂನ ಕಸಾರ್ ಜಿಲ್ಲೆಯ ಡಿಸಿ ಕೀರ್ತಿ ಜಲ್ಲಿ ಅವರು ತಮ್ಮ ವಿವಾಹಕ್ಕಾಗಿ ಒಂದು ದಿನದ ರಜೆಯನ್ನೂ ತೆಗೆದುಕೊಳ್ಳದೆ ಕರ್ತವ್ಯನಿಷ್ಠೆ ಮೆರೆದಿದ್ದಾರೆ.
ಕೀರ್ತಿ ಅವರ ಮದುವೆಯು ಹೈದರಾಬಾದ್ನಲ್ಲಿ ನಿಶ್ಚಯವಾಗಿತ್ತು. ತಾವು ಕಾರ್ಯ ನಿರ್ವಹಿಸುತ್ತಿದ್ದ ಜಿಲ್ಲೆಯಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದರಿಂದ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಅವರು ತಮ್ಮ ಮದುವೆಗೆ ಬರಲು ಸಾಧ್ಯವಿಲ್ಲ ಎಂದು ಕುಟುಂಬಕ್ಕೆ ಹೇಳಿದ್ದರು.
ಕೀರ್ತಿ ಅವರ ನಿರ್ಧಾರದಿಂದ ಅಚ್ಚರಿಗೊಳಗಾದ ಕುಟುಂಬ ಹಾಗೂ ವರನ ಸಮೇತ ಎಲ್ಲರೂ ಕಸಾರ್ ಜಿಲ್ಲೆಗೆ ತೆರಳಿ ಅಲ್ಲಿಯೇ ಮದುವೆಯಾದರು. ಒಂದೇ ಗಂಟೆಯಲ್ಲಿ ವಿವಾಹ ಕಾರ್ಯಕ್ರಮ ಮುಕ್ತಾಯಗೊಂಡಿತು. ಆ ಬಳಿಕ ಅವರು ತಮ್ಮ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
2013ರ ಬ್ಯಾಚ್ನ ಕೀರ್ತಿ ಜಲ್ಲಿ ಅವರ ಈ ವಿವಾಹವನ್ನು 800ಕ್ಕೂ ಹೆಚ್ಚು ಮಂದಿ ವಿಡಿಯೋ ಕಾಲ್ ಮೂಲಕ ವಿದೇಶದಿಂದಲೂ ವೀಕ್ಷಿಸಿದ್ದಾರೆ. ಕೀರ್ತಿ ಅವರು ತೆಗೆದುಕೊಂಡ ನಿರ್ಧಾರದ ಬಗ್ಗೆ ಕುಟುಂಬವು ಹೆಮ್ಮೆ ಪಡುತ್ತಿದೆ.