ತಿಥಿ ನಟಿ ಪೂಜಾಗೆ ನಿರ್ದೇಶಕಿಯಾಗುವ ಕನಸು..!
ಪೂಜಾ ಹೆಸರಿನಲ್ಲಿ ಕನ್ನಡದಲ್ಲೇ ಒಂದಿಬ್ಬರು ನಟಿಯರು ಬಂದು ಹೋಗಿದ್ದಾರೆ. ಅವರಲ್ಲಿ ಪ್ರತಿಯೊಬ್ಬರು ಕೂಡ ಚಿತ್ರರಂಗದಲ್ಲಿ ತಮ್ಮದೇ ಸ್ಥಾನ ಕಂಡುಕೊಂಡಿದ್ದಾರೆ. ಅದೇ ದಾರಿಯಲ್ಲಿರುವ ತಿಥಿ ಚಿತ್ರದ ಖ್ಯಾತಿಯ ಪೂಜಾ ತಮ್ಮ ಪ್ರಥಮ ಚಿತ್ರದ ನಟನೆಗೆ ಪ್ರಶಸ್ತಿ ಪಡೆದುಕೊಂಡವರು. ಕಮರ್ಷಿಯಲ್ ಚಿತ್ರದ ಪರದೆಯ ಮೇಲಿನ ನಾಯಕಿಗೆ ಬೇಕಾದ ಎಲ್ಲ ಗುಣಗಳೂ ಇರುವವರು. ಹಾಗಾಗಿಯೇ ಒಂದಷ್ಟು ಮಾಸ್ ಚಿತ್ರಗಳ ಮೂಲಕವೂ ಗುರುತಿಸಲು ತಯಾರಾಗುತ್ತಿದ್ದಾರೆ. ಆದರೆ ಅವರ ಕೆಲವು ಕಂಡೀಶನ್ಸ್ ಇವೆ. ಅವುಗಳೇನು ಎನ್ನುವುದನ್ನು ವಿಜಯ ಟಾಕೀಸ್ ಜತೆಗೆ ಹಂಚಿಕೊಂಡಿದ್ದಾರೆ
`ತಿಥಿ’ ನಿಮಗೆ ಯಶಸ್ಸು, ಪ್ರಶಸ್ತಿ ತಂದುಕೊಟ್ಟರೂ ಅವಕಾಶಗಳನ್ನು ನೀಡಲಿಲ್ಲ ಎನ್ನಬಹುದೇ?
ಅವಕಾಶಗಳು ಕೂಡ ಬಂದವು. ಆದರೆ ತಿಥಿಯಂಥ ಪಾತ್ರದಲ್ಲಿ ಕಾಣಿಸಿದ ಮೇಲೆ ನನ್ನ ಇತರ ಸಿನಿಮಾಗಳ ಪಾತ್ರದ ಬಗ್ಗೆಯೂ ಪ್ರೇಕ್ಷಕರಿಗೆ ನಿರೀಕ್ಷೆ ಸಹಜ. ನನಗೂ ನಟನೆಗೆ ಅವಕಾಶ ಇರುವ ಅಂಥ ಪಾತ್ರವೇ ಬೇಕಾಗಿತ್ತು. ಆದರೆ ಬಂದ ಅವಕಾಶಗಳಲ್ಲಿ ಹೆಚ್ಚಿನವುಗಳಲ್ಲಿ ನಾಯಕಿಗೆ ನಟನೆಯ ಅವಕಾಶವೇ ಇರಲಿಲ್ಲ. ಹಾಗಾಗಿ ಇರುವುದರಲ್ಲಿ ಉತ್ತಮವಾದವುಗಳನ್ನು ಮಾತ್ರ ಆಯ್ದುಕೊಂಡೆ. ನೀವು `ಯಾನ’ ಸಿನಿಮಾ ನೋಡಿದ್ದರೆ ಖಂಡಿತವಾಗಿ ನನ್ನ ಪಾತ್ರವನ್ನು ನೆನಪಿಸಿಕೊಳ್ಳಬಹುದು. ಜತೆಗೆ ಇನ್ನೊಂದು ವಿಷಯ ಇದೆ. ನಾವು ಪಾತ್ರಗಳನ್ನು ಆಯ್ಕೆ ಮಾಡಬಹುದು. ನಮ್ಮಿಂದಾಗುವ ಮಟ್ಟಕ್ಕೆ ನಟಿಸಬಹುದು. ಅದು ಜನರಿಗೆ ಇಷ್ಟವಾಗುವುದು ಸೇರಿದಂತೆ ಉಳಿದಿದ್ದೆಲ್ಲವೂ ನಮ್ಮ ಕೈಯ್ಯಲ್ಲಿ ಇರುವುದಿಲ್ಲವಲ್ಲ. ಒಟ್ಟಿನಲ್ಲಿ ನನ್ನ ಪ್ರಯತ್ನ ಮಾಡುತ್ತಿರುತ್ತೇನೆ.
ಸದ್ಯಕ್ಕೆ ನೀವು ಯಾವೆಲ್ಲ ಚಿತ್ರಗಳು ಯಾವ ಹಂತದಲ್ಲಿವೆ?
ಒಂದು ಚಿತ್ರ ಈಗಾಗಲೇ ನಟಿಸಿ ಮುಗಿಸಿದ್ದೀನಿ. ದಾರಿ ಯಾವುದಯ್ಯಾ ವೈಕುಂಠಕೆ’ ಎನ್ನುವುದು ಅದರ ಹೆಸರು. ಚಿತ್ರದಲ್ಲಿ ನಾನು ಮಸಣದಲ್ಲಿ ಹೆಣ ಸುಡುವ ಹುಡುಗಿಯ ಪಾತ್ರ ಮಾಡಿದ್ದೇನೆ. ಕಳೆದ ತಿಂಗಳು ಅದರ ಡಬ್ಬಿಂಗ್‌ಗೆ ಬೆಂಗಳೂರಿಗೆ ಬಂದಿದ್ದೆ. ಈಗಯು ಟರ್ನ್ 2′ ಎನ್ನುವ ಚಿತ್ರದ ಶೂಟಿಂಗ್‌ಗಾಗಿ ಬೆಂಗಳೂರಿಗೆ ಬಂದಿದ್ದೇನೆ. ಲಾಕ್ಡೌನ್ ಬಳಿಕ ಇದೇ ಪ್ರಥಮ ಬಾರಿಗೆ ನಾನು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೇನೆ. ಇದಕ್ಕೂ ಯುಟರ್ನ್ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ. ಆದರೆ ಇಲ್ಲಿಯೂ ಹಾರರ್ ಎಲಿಮೆಂಟ್ ಇದೆ. ನನ್ನದು ಚಿತ್ರದಲ್ಲಿ ಡಾಕ್ಟರ್ ಪಾತ್ರ. ಇನ್ನೊಂದು ಚಿತ್ರದ ಹೆಸರು `ಬೀದಿ ದೀಪ’. ಅದು ಶುರುವಾಗಬೇಕಿದೆ. ಅದರಲ್ಲಿ ನನ್ನದು ಬಿಇ ವಿದ್ಯಾರ್ಥಿನಿಯ ಪಾತ್ರ. ನನಗೆ ಸಂಬಂಧಿಸಿದ ಹಾಗೆ ಅದು ತುಂಬ ಆಪ್ತವಾಗುವ ಪಾತ್ರ. ಯಾಕೆಂದರೆ ನಾನು ಕೂಡ ಬಿ ಇ ಮಾಡಿದ್ದೇನೆ. ಉಳಿದಂತೆ ಲವ್, ಎಮೋಶನಲ್ ಎಲ್ಲವೂ ಇದೆ. ಬಡ ಹುಡುಗನನ್ನು ಪ್ರೀತಿಸುವ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದೇನೆ.
ಲಾಕ್ಡೌನ್ ದಿನಗಳನ್ನು ರಾಣಿಬೆನ್ನೂರಿನಲ್ಲೇ ಕಳೆದಿರಾ?
ಹೌದು. ನಾನು ನನ್ನ ಊರಲ್ಲೇ ಇದ್ದೆ. ನಾನು ಮಲ್ಟಿ ನ್ಯಾಶನಲ್ ಸಂಸ್ಥೆಯಲ್ಲಿ ನೆಟ್ವರ್ಕ್ ಎಂಜಿನಿಯರ್ ಆಗಿ ವೃತ್ತಿಯಲ್ಲಿದ್ದೇನೆ. ಹಾಗಾಗಿ ವರ್ಕ್ ಫ್ರಮ್ ಹೋಮ್ ಇತ್ತು. ಅದರೊಂದಿಗೆ ಬಿಡುವಿನ ವೇಳೆಯನ್ನು ನನ್ನ ಮೆಚ್ಚಿನ ಹವ್ಯಾಸಗಳಾದ ಚಿತ್ರ ಬಿಡಿಸುವುದರ ಮೂಲಕ ಕಳೆದೆ. ಬಹುಶಃ ಟೆಕ್ನಿಕಲ್ ವಿಭಾಗದಲ್ಲಿ ಕಲಿತಿರುವ ಕಾರಣದಿಂದ ಇರಬಹುದು ನನಗೆ ಸಿನಿಮಾದಲ್ಲಿ ಪರದೆ ಹಿಂದಿನ ತಾಂತ್ರಿಕ ಕೆಲಸಗಳ ಬಗ್ಗೆ ವಿಶೇಷ ಆಸಕ್ತಿ ಇದೆ. ಅದರಲ್ಲಿಯೂ ನಿರ್ದೇಶನ ಮಾಡುವುದು ನನ್ನ ಕನಸು. ವೆಬ್ ಸೀರೀಸ್ ಮೂಲಕ ಮೊದಲ ನಿರ್ದೇಶನದ ಪ್ರಯೋಗ ಮಾಡೋಣ ಎನ್ನುವ ಕನಸು ಕಂಡಿದ್ದೀನಿ. ಹಾಗಂತ ತಯಾರಿಗಳೇನೂ ನಡೆದಿಲ್ಲ. ಎಲ್ಲದಕ್ಕೂ ಸಮಯ ಕೂಡಿ ಬರಬೇಕು ಅಂತಾರಲ್ಲ?
ಶಶಿಕರ ಪಾತೂರು