ಲಕ್ಷಾಂತರ ಬೆಲೆಯ ಮದ್ಯ ಕಳವುಗೈದಿರುವ ಘಟನೆ ಕುತ್ತಾರು ನಿತ್ಯಾನಂದನಗರದಲ್ಲಿ ಎಂಎಸ್ ಐಎಲ್ ನ ವೈನ್ಸ್ ಶಾಪ್ ನಲ್ಲಿ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ಪುರುಷೋತ್ತಮ್ ಪಿಲಾರ್ ಅವರು ಗುತ್ತಿಗೆ ಪಡೆದಿರುವ ಎಂಎಸ್ ಐಎಲ್ ನ ವೈನ್ಸ್ ನಲ್ಲಿ ಈ ಘಟನೆ ನಡೆದಿದ್ದು, ಅಂಗಡಿಯ ಶಟರ್ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಕಡಿಮೆ ಬೆಲೆಯ ಮದ್ಯ ಸೇರಿದಂತೆ ಅಧಿಕ ಬೆಲೆಯ ಮದ್ಯದ ಬಾಟಲಿಗಳನ್ನು ದರೋಡೆಗೈದಿದ್ದಾರೆ. ತಮ್ಮ ಕೃತ್ಯ ಹೊರಗೆ ಯಾರಿಗೂ ಕಾಣಿಸದಂತೆ ಅಂಗಡಿ ಎದುರು ಬಟ್ಟೆಯನ್ನು ಕಟ್ಟಿ ಶಟರ್ ಬಾಗಿಲನ್ನು ಮುರಿದಿದ್ದಾರೆ.
ವೈನ್ಸ್ ಅಂಗಡಿಯೊಳಕ್ಕೆ ಸಿಸಿಟಿವಿ ಅಳವಡಿಸಲಾಗಿದೆ. ಆದರೆ ಚಾಣಾಕ್ಷತನ ತೋರಿಸಿರುವ ಕಳ್ಳರು ಸಿಸಿಟಿವಿ ದಾಖಲೆ ಹೊಂದಿರುವ ಡಿವಿಆರ್ ನ್ನೂ ಕೂಡ ಕಳವು ನಡೆಸಿದ್ದಾರೆ. ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ.ಅಂಗಡಿಯ ಶಟರ್ ತೆರೆಯುವುದನ್ನು ಕಂಡ ರಸ್ತೆಯಲ್ಲಿ ಸಂಚರಿಸುವ ವೈನ್ಸ್ ಅಂಗಡಿ ತೆರೆದಿರುವುದೆಂದು ಭಾವಿಸಿ, ಮದ್ಯ ನೀಡುವಂತೆ ಕೇಳಿಕೊಳ್ಳುತ್ತಿರುವ ದೃಶ್ಯ ಸ್ಥಳದಲ್ಲಿ ಕಂಡುಬಂತು. ದ್ವಿಚಕ್ರ ವಾಹನಗಳಲ್ಲಿ ಕೆಲವರು ಬಂದರೆ, ಇನ್ನು ಕೆಲವರು ಕಾರಿನಲ್ಲಿ ಬಂದು ಮದ್ಯ ಕೇಳಿ ಪೊಲೀಸರಿಂದ ಉಗಿಸಿಕೊಂಡರು.
ವೈನ್ಸ್ ಅಂಗಡಿ ಸಮೀಪದಲ್ಲೇ ಇರುವ ಪಾನ್ ಅಂಗಡಿಯಿಂದ ೧೦ ಪ್ಯಾಕೆಟ್ ಸಿಗರೇಟುಗಳನ್ನು ಕಳ್ಳರು ಕಳವುಗೈದಿದ್ದಾರೆ. ಮೂರು ವರ್ಷದಲ್ಲಿ ೧೦ನೇ ಬಾರಿ ಇದೇ ರೀತಿಯಲ್ಲಿ ಕಳವು ನಡೆಯುತ್ತಿದೆ ಎಂದು ಪಾನ್ ವಾಲಾ ಪೊಲೀಸರಲ್ಲಿ ಹೇಳಿಕೊಂಡಿದ್ದಾನೆ. ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.