ನವದೆಹಲಿ, ಅ.19: ಭಾರತದಲ್ಲಿ ಕೊರೋನಾ ಸೋಂಕು ತಾರಕಕ್ಕೆ ಏರಿ, ಇದೀಗ ಸೋಂಕಿನ ಪ್ರಮಾಣ ಇಳಿಮುಖವಾಗಿರುವುದು ಸಂತೋಷದ ವಿಚಾರ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿಯ ಪ್ರಕಾರ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 55,722 ಪ್ರಕರಣಗಳು ಪತ್ತೆಯಾಗಿದ್ದು, ಇದೀಗ ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 75 ಲಕ್ಷ ಗಡಿದಾಟಿದೆ. ಇಷ್ಟೂ ದಿನ 1000ಕ್ಕಿಂತಲೂ ಹೆಚ್ಚು ದಾಖಲಾಗುತ್ತಿದ್ದ ಸಾವಿನ ಸಂಖ್ಯೆ ಕೂಡ ಇಳಿಮುಖವಾಗುತ್ತಿದೆ. ಒಂದೇ ದಿನ 579 ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 1,14,610ಕ್ಕೆ ತಲುಪಿದೆ ಎಂದು ಹೇಳಿದೆ.
ಪ್ರಸ್ತುತ ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 75,50,273ರಷ್ಟಿದ್ದು, 75 ಲಕ್ಷ ಸೋಂಕಿತರ ಪೈಕಿ ಈ ವರೆಗೂ 66,63,608 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, 7,72,055ರಷ್ಟು ಸಕ್ರಿಯ ಪ್ರಕರಣಗಳಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿದು ಬಂದಿದೆ.
ಈ ನಡುವೆ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 8,59,786 ಸ್ಯಾಂಪಲ್ಸ್ ಗಳನ್ನು ಪರೀಕ್ಷೆ ನಡೆಸಲಾಗಿದ್ದು, ಇದರೊಂದಿಗೆ ದೇಶದಲ್ಲಿ ಈ ವರೆಗೂ 9,50,83,976 ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ತಿಳಿಸಿದೆ.