ಮಡಿಕೇರಿ, ನ. 23: ಧಾರಾ ಮುಹೂರ್ತ ಮುಗಿಸಿಕೊಂಡು ನವವಿವಾಹಿತೆ ಕಲ್ಯಾಣ ಮಂಟಪದಿಂದ ನೇರವಾಗಿ ಪರೀಕ್ಷೆಗೆ ಹಾಜರಾಗಿ ಪರೀಕ್ಷೆ ಬರೆದ ಪ್ರಸಂಗ ಮಡಿಕೇರಿ ಜಿಲ್ಲೆಯಲ್ಲಿ ನಡೆದಿದೆ.
ಮಡಿಕೇರಿಯ ಅಶೋಕಪುರ ನಿವಾಸಿ ಸ್ವಾತಿ (ಮಂಜುಳಾ) ತಮ್ಮ ಮದುವೆ ಮುಗಿಸಿಕೊಂಡು ಕಲ್ಯಾಣ ಮಂಟಪದಿಂದ ನೇರವಾಗಿ ನಗರದ ಜೂನಿಯರ್ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಿದ್ದಾರೆ. ವಿವಾಹ ನಿಗದಿಗೂ ಮೊದಲು ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡಿದ್ದ ಸ್ವಾತಿ ಅವರಿಗೆ ಸುಂಟಿಕೊಪ್ಪದ ಮದುರಮ್ಮ ಪಟ್ಟಣದ ಸುರೇಶ್ ಅವರೊಂದಿಗೆ ಮಡಿಕೇರಿಯ ಅಂಬೇಡ್ಕರ್ ಭವನದಲ್ಲಿ ಮದುವೆ ನಿಶ್ಚಯವಾಗಿತ್ತು.
ವಿಪರ್ಯಾಸವೆಂದರೆ ಪರೀಕ್ಷಾ ದಿನದಂದೇ ಮದುವೆ ನಿಗದಿಯಾಗಿತ್ತು. ಆದರೂ ಧೃತಿಗೆಡದೆ ಇಬ್ಬರ ಕುಟುಂಬದವರು ಸ್ವಾತಿ ಪರೀಕ್ಷೆಗೆ ಅಡ್ಡಿಯಾಗದಂತೆ ಬೆಳಗ್ಗೆ ೬.೩೦ ಗಂಟೆಯಿಂದ ೯ ಗಂಟೆವರೆಗೆ ಇದ್ದ ಶುಭಲಗ್ನದಲ್ಲಿ ಧಾರೆ ಮುಹೂರ್ತ ನಿಗದಿಪಡಿಸಿಕೊಂಡು ವಿವಾಹ ನೆರವೇರಿಸಿದರು.
ಬಳಿಕ ಮದುವೆ ಕಾರ್ಯಗಳು ಮುಗಿಸಿಕೊಂಡ ನವವಿವಾಹಿತೆ, ಪರೀಕ್ಷಾ ಕೇಂದ್ರಕ್ಕೆ ಹಾಜರಾದರು. ಇಂತಹದ್ದೊಂದು ಅವಕಾಶ ಎಲ್ಲರಿಗೂ ಸಿಗುವುದಿಲ್ಲ ಎಂದು ಕುಟುಂಬದವರು ಧೈರ್ಯ ಹೇಳಿದ್ದರು. ನಾನೂ ಕೂಡ ಪರೀಕ್ಷೆಗೆ ೯ ತಿಂಗಳಿಂದ ತಯಾರಾಗಿದ್ದೆ. ಪರೀಕ್ಷೆ ಬರೆಯುವ ಉದ್ದೇಶದಿಂದಲೇ ಮದುವೆ ಶಾಸ್ತ್ರಗಳನ್ನು ಸ್ವಲ್ಪ ಆತುರವಾಗಿಯೇ ಮುಗಿಸಿದ್ದೇವೆ. ಪರೀಕ್ಷೆಯಲ್ಲಿ ಉತ್ತೀರ್ಣಳಾಗುತ್ತೇನೆ ಎನ್ನುವ ವಿಶ್ವಾಸವಿದೆʼ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.