ವಿಶ್ವ ಕ್ರಿಕೆಟ್‍ನ ಸರ್ವಕಾಲಿಕ ಶ್ರೇಷ್ಠ ಆಟಗಾರ, ಟೀಮ್ ಇಂಡಿಯಾ ಮಾಜಿ ನಾಯಕನ ಮಹೇಂದ್ರ ಸಿಂಗ್ ಧೋನಿ, ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಇತ್ತೀಚೆಗಷ್ಟೇ ವಿದಾಯ ಹೇಳಿದ್ದಾರೆ. ಆದರೆ 16 ವರ್ಷಗಳ ಕ್ರಿಕೆಟ್ ಅಂಗಳದಲ್ಲಿ ಮಿಂಚಿ ಕೋಟ್ಯಾಂತರ ಪ್ರೇಕ್ಷಕರ ಮನಗೆದ್ದಿದ್ದ ಧೋನಿಗೆ ಅತ್ಯುತ್ತಮ ಬೀಳ್ಕೊಡುಗೆ ನೀಡಬೇಕಿತ್ತು ಎಂಬುದು ಅಪಾರ ಅಭಿಮಾನಿಗಳ ಬಯಕೆಯಾಗಿತ್ತು.
ಇದೇ ಕಾರಣದಿಂದ ದಿಢೀರನೇ ವಿದಾಯ ಹೇಳಿದ ಧೋನಿಗೆ ಬೀಳ್ಕೊಡುಗೆ ಪಂದ್ಯ ಆಯೋಜಿಸಬೇಕೆಂಬ ಮಾತುಗಳು ಕೇಳಿ ಬಂದಿವೆ. ಕೇವಲ ಅಭಿಮಾನಿಗಳು ಮಾತ್ರವಲ್ಲದೇ, ಕ್ರಿಕೆಟಿಗರು ಸಹ ಇದೇ ಮಾತುಗಳನ್ನಾಡಿದ್ದಾರೆ. ಹೀಗಾಗಿಯೇ ಮಹೇಂದ್ರ ಸಿಂಗ್ ಧೋನಿ ಅವರ ಅಭಿಮಾನಿಗಳ ಈ ಕನಸು ಈಡೇರುವ ಎಲ್ಲಾ ಸೂಚನೆಗಳು ಸಿಕ್ಕಂತಾಗಿದೆ.
ಭಾರತ ಕ್ರಿಕೆಟ್ ತಂಡದ ಯಶಸ್ಸಿಗೆ ಕಾರಣರಾಗುವ ಜತೆಗೆ ಭಾರತೀಯ ಕ್ರಿಕೆಟ್‍ನಲ್ಲಿ ಹೊಸ ಆಂದೋಲನವನ್ನೇ ಸೃಷ್ಟಿಸಿದ ಧೋನಿ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕಾಣಿಸಿಕೊಂಡು ಒಂದು ವರ್ಷವೇ ಕಳೆದಿದೆ. ಈ ಎಲ್ಲಾ ಅಂಶಗಳನ್ನು ಮನಗಂಡ ಬಿಸಿಸಿಐ, ಕೂಲ್ ಕ್ಯಾಪ್ಟನ್‍ಗಾಗಿ ಅಂತಿಮ ಪಂದ್ಯವೊಂದನ್ನು ನಡೆಸಲು ಚಿಂತನೆ ನಡೆಸಿದೆ. ಆದರೆ ಇದಕ್ಕೆ ವೇದಿಕೆ ಸಿದ್ದಪಡಿಸಲು ಪ್ರಸಕ್ತ ಸಾಲಿನ ಐಪಿಎಲ್ ಮುಗಿಯಬೇಕಿದೆ.
ಈ ಕುರಿತು ಮಾತನಾಡಿದ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು, ಬೀಳ್ಕೊಡುಗೆ ಪಂದ್ಯದ ಕುರಿತು ಬಿಸಿಸಿಐ ಮಹೇಂದ್ರ ಸಿಂಗ್ ಧೋನಿ ಜೊತೆ ಮಾತನಾಡಲಿದ್ದು, ಆ ಬಳಿಕ ಪಂದ್ಯದ ರೂಪುರೇಷೆ ಸಿದ್ದಪಡಿಸಲಿದೆ. ಸದ್ಯ ಯಾವುದೇ ಅಂತಾರಾಷ್ಟ್ರೀಯ ಸರಣಿಗಳು ನಡೆಯುತ್ತಿಲ್ಲ. ಆದ್ದರಿಂದ ಐಪಿಎಲ್ ನಂತರ ಬೀಳ್ಕೊಡುಗೆ ಪಂದ್ಯದ ಬಗ್ಗೆ ತೀರ್ಮಾನಿಸಲಿದ್ದೇವೆ. ಭಾರತ ತಂಡಕ್ಕಾಗಿ ಧೋನಿ ತುಂಬಾ ಶ್ರಮವಹಿಸಿದ್ದು, ಅವರು ಎಲ್ಲಾ ರೀತಿಯ ಗೌರವಗಳಿಗೂ ಅರ್ಹರು. ಹೀಗಾಗಿ ಖಂಡಿತವಾಗಿ ಬೀಳ್ಕೊಡುಗೆ ಪಂದ್ಯ ಆಯೋಜಿಸಬೇಕೆಂಬ ನಿರ್ಧಾರಿಸಿರುವುದಾಗಿ ಮಾಹಿತಿ ನೀಡಿದ್ದಾರೆ. ಹೀಗಾಗಿ ಟೀಮ್ ಇಂಡಿಯಾದ ಯಶಸ್ವಿ ನಾಯಕನಿಗೆ ಅತ್ಯುತ್ತಮ ಬೀಳ್ಕೊಡುಗೆ ನೀಡಬೇಕು ಎಂಬ ಅಪಾರ ಅಭಿಮಾನಿಗಳ ಕನಸು ಈಡೇರುವ ಸೂಚನೆಗಳು ಸಿಕ್ಕಂತಾಗಿದೆ. ಆದರೆ ಇದೆಲ್ಲವೂ ಧೋನಿಯ ನಿರ್ಧಾರ ಮೇಲೆ ಅವಲಂಬಿಸಿದೆ.