ದುಬೈ, ಅ. 21: 13ನೇ ಆವೃತ್ತಿಯ ಐಪಿಎಲ್‍ನಲ್ಲಿ ನೀರಸ ಪ್ರದರ್ಶನದ ಮೂಲಕ ಸೋಲಿನ ಸುಳಿಗೆ ಸಿಲುಕಿರುವ ಚೆನ್ನೈ ಸೂಪರ್ ಕಿಂಗ್ಸ್
ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ.
ಚೆನ್ನೈ ತಂಡದ ಪ್ರಮುಖ ಆಲ್‍ರೌಂಡರ್ ಡ್ವೇನ್ ಬ್ರಾವೋ, ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರಗುಳಿದಿದ್ದಾರೆ. ಅ.17ರಂದು ಡೆಲ್ಲಿ ವಿರುದ್ಧ ನಡೆದ ಪಂದ್ಯದಲ್ಲಿ ಬ್ರಾವೋ, ತೊಡೆಸಂದು ಸಮಸ್ಯೆಗೆ ತುತ್ತಾಗಿದ್ದರು. ಹೀಗಾಗಿ ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲಿ ಬ್ರಾವೋ, ಕಣಕ್ಕಿಳಿಯಲಿಲ್ಲ.
ಈ ನಡುವೆ ಗಾಯದ ಸಮಸ್ಯೆ ಕಾರಣಕ್ಕೆ ಡ್ವೇನ್ ಬ್ರಾವೋ, ಐಪಿಎಲ್ ಟೂರ್ನಿಯಿಂದ ಹೊರಗುಳಿಯುವ ನಿರ್ಧಾರ ಮಾಡಿದ್ದಾರೆ. ಈ ವಿಷಯವನ್ನು ಚೆನ್ನೈ ತಂಡದ ಸಿಇಒ ವಿಶ್ವನಾಥನ್ ಸ್ಪಷ್ಟಪಡಿಸಿದ್ದಾರೆ. ಚೆನ್ನೈ ತಂಡದ ಪ್ರಮುಖ ಆಲ್‍ರೌಂಡರ್ ಆಗಿರುವ ಬ್ರಾವೋ, ಪ್ರಸಕ್ತ ಐಪಿಎಲ್‍ನಲ್ಲಿ 6 ಪಂದ್ಯಗಳನ್ನು ಮಾತ್ರ ಆಡಿದ್ದಾರೆ.
ಟೂರ್ನಿಯಲ್ಲಿ ಈಗಾಗಲೇ 10 ಪಂದ್ಯಗಳನ್ನಾಡಿರುವ ಚೆನ್ನೈ, 3 ಗೆಲುವು, 7 ಸೋಲಿನೊಂದಿಗೆ ಕೊನೆ ಸ್ಥಾನದಲ್ಲಿದ್ದು, ಸೂಪರ್ ಕಿಂಗ್ಸ್ ಪ್ಲೇ-ಆಫ್ ಹಾದಿ ಬಹುತೇಕ ಮುಚ್ಚಿದೆ. ಆದರೆ ಟೂರ್ನಿಯ ಮುಂದಿನ ನಾಲ್ಕು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದ್ದ ಚೆನ್ನೈಗೆ, ಬ್ರಾವೋ ಅನುಪಸ್ಥಿತಿ ಗಾಯದ ಮೇಲೆ ಬರೆ ಎಳೆದಂತಾಗಿದೆ.