ಬೆಂಗಳೂರು, ಡಿ. 27: ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಪ್ರತಿಮೆ ಧ್ವಂಸಗೊಳಿಸಿರುವ ಕಿಡಿಗೇಡಿಗಳ ಕೃತ್ಯವನ್ನು ತೀವ್ರವಾಗಿ ಖಂಡಿಸಿರುವ ನಟ ಕಿಚ್ಚ ಸುದೀಪ್, “ಪ್ರತಿಮೆ ಧ್ವಂಸ ಮಾಡಿರುವ ಮಹಾನುಭಾವ ದಯವಿಟ್ಟು ಸಿಕ್ಕಿ ಹಾಕಿಕೊಳ್ಳದಂತೆ ನೋಡಿಕೊಳ್ಳಿ, ಹೆಸರು ಬಹಿರಂಗಗೊಂಡ ದಿನ ದೇಶ ಬಿಟ್ಟು ಓಡಿ ಹೋಗಿ” ಎಂದು ಸಲಹೆ ಜತೆಗೆ ಎಚ್ಚರಿಕೆಯನ್ನು ನೀಡಿದ್ದಾರೆ.
ಘಟನೆಯನ್ನು ಖಂಡಿಸಿ ಟ್ವಿಟರ್ ಖಾತೆಯಲ್ಲಿ ವಿಡಿಯೋ ಬಿಡುಗಡೆ ಮಾಡಿರುವ ಅವರು,
ವಿಷ್ಣುವರ್ಧನ್ ಪ್ರತಿಮೆ ಧ್ವಂಸಗೊಳಿಸಿರುವ ವಿಷಯ ತಮ್ಮ ಗಮನಕ್ಕೆ ಬಂದಿದೆ. ಆದರೆ ಪ್ರತಿಮೆಯನ್ನು ಹೊಡೆದು ಹಾಕಿರುವ ಮಹಾನುಭಾವರಿಗೆ ವಿಷ್ಣು ಸರ್ ಅವರ ಅಭಿಮಾನಿಯಾಗಿ ಒಂದು ವಿಷಯ ಹೇಳುತ್ತೇನೆ. ದಯವಿಟ್ಟು ಸಿಕ್ಕಿ ಹಾಕಿಕೊಳ್ಳಬೇಡಿ. ಒಂದೊಮ್ಮೆ ನೀವು ಸಿಕ್ಕಿದರೆ ಅಥವಾ ಹೊಡೆದು ಹಾಕಿರುವವರು ಯಾರು ಅಂತಾ ಗೊತ್ತಾದರೆ ಅವರ ಅಭಿಮಾನಿಗಳು ಅತ್ಯಂತ ಹೀನಾಯವಾಗಿ ನಿಮ್ಮನ್ನು ಹೊಡೆದು ಹಾಕುತ್ತಾರೆ.
ಪ್ರತಿಮೆ ಹೊಡೆದು ಹಾಕಿರುವ ನಿಮ್ಮ ಉದ್ದೇಶ ಮನುಷ್ಯರಾದವರಿಗೆ ಅರ್ಥವಾಗಲ್ಲ ಹಾಗೂ ಅರ್ಥವಾಗಲು ಸಾಧ್ಯವಿಲ್ಲ. ಹಾಗಾಗಿ ನೀವು ಎಲ್ಲೇ ಕುಳಿತಿದ್ದರೂ, ದಯವಿಟ್ಟು ಸಿಕ್ಕಿ ಹಾಕಿಕೊಳ್ಳದಂತೆ ನೋಡಿಕೊಳ್ಳಿ. ಏಕೆಂದರೆ, ನಿಮ್ಮ ಹೆಸರು ಹೊರಗೆ ಬಂದ ದಿನ ಏನು ನಡೆಯಲಿದೆ, ಅದನ್ನು ಖಂಡಿತವಾಗಿ ಯಾರು ತಡೆಯಲು ಸಾಧ್ಯವಾಗುವುದಿಲ್ಲ. ಆದರೆ ವಿಷ್ಣು ಪ್ರತಿಮೆ ಹೊಡೆಯುವ ಮುನ್ನ ಒಂದು ಬಾರಿ ನೀವು ಯೋಜನೆ ಮಾಡಿದ್ದರೆ, ಒಬ್ಬ ವ್ಯಕ್ತಿ ಅಥವಾ ಮನುಷ್ಯನಾಗಿ ಮಾಡುವ ಕೆಲಸವೇ ಅಲ್ಲ ಅದು. ಇಂತಹ ಹೀನ ಕೆಲಸ ಮಾಡುವವರು ಯಾರು ಎಂದು ಹೇಳಲು ಅಸಹ್ಯವಾಗುತ್ತದೆ. ದಯವಿಟ್ಟು ಸಿಕ್ಕಿ ಹಾಕಿಕೊಳ್ಳದಂತೆ ನೋಡಿಕೊಳ್ಳಿ, ಹೆಸರು ಬಹಿರಂಗಗೊಂಡ ದಿನ ದೇಶ ಬಿಟ್ಟು ಓಡಿ ಹೋಗಿ, ಇದು ನಾನು ಕೊಡುತ್ತಿರುವ ಸಲಹೆ. ನೀವು ಒಡೆದು ಹಾಕಿರುವ ಪ್ರತಿಮೆಗಿಂತಲೂ ದೊಡ್ಡದಾದ ಪ್ರತಿಮೆ ಕಟ್ಟುತ್ತೇವೆ.