ಶುಕ್ರವಾರ ಒಟಿಟಿಯಲ್ಲಿ ಬಿಡುಗಡೆ ಕಂಡು ದಾಖಲೆ ಮಟ್ಟದ ವೀಕ್ಷಣೆಗೊಳಗಾಗಿರುವ ಚಿತ್ರ ಹಿಂದಿಯ `ದಿಲ್ ಬೆಚಾರ’. ಸುಶಾಂತ್ ರಾಜಪುತ್ ಅಭಿನಯದ ಕೊನೆಯ ಚಿತ್ರ ಎನ್ನುವ ಕಾರಣದಿಂದ ಹೆಚ್ಚು ಗಮನ ಸೆಳೆದ ಈ ಸಿನಿಮಾ ಬಿಡುಗಡೆಯ ಬಳಿಕ ಅದರ ವಸ್ತು ಮತ್ತು ಗುಣಮಟ್ಟದ ಕಾರಣದಿಂದಲೂ ಸುದ್ದಿಯಾಯಿತು. ಚಿತ್ರವನ್ನು ಕನ್ನಡ ಚಿತ್ರರಂಗದ ಮಂದಿಯೂ ವೀಕ್ಷಿಸಿದ್ದಾರೆ. ಅವರಲ್ಲಿ ನಾವು `ವಿಜಯ ಟೈಮ್ಸ್’ ವತಿಯಿಂದ ವಿಶೇಷವಾಗಿ ಚಿತ್ರದ ಬಗ್ಗೆ ಒಂದು ಅನಿಸಿಕೆಯನ್ನು ನಾಡಿನ ಖ್ಯಾತ ಸಂಕಲನಕಾರ, ಜನಪ್ರಿಯ ನಿರ್ದೇಶಕ ನಾಗೇಂದ್ರ ಅರಸ್ ಅವರಲ್ಲಿ ಕೇಳಿದ್ದೇವೆ. ಅವರು ನೀಡಿರುವ ವಿಶ್ಲೇಷಣೆ ಇದು.
ನಾನು ಲಾಕ್ಡೌನ್ ಬಳಿಕ ಸಾಕಷ್ಟು ಸಿನಿಮಾಗಳನ್ನು ನೋಡಿದ್ದೇನೆ. ಅವುಗಳಲ್ಲಿ ಹಾಲಿವುಡ್ ನಿಂದ ನಮ್ಮ ಕನ್ನಡದ ತನಕ ಸಕಷ್ಟು ಚಿತ್ರಗಳಿವೆ. ಅವುಗಳಲ್ಲಿ ಬಹಳಷ್ಟು ಮಲಯಾಳಂ ಸಿನಿಮಾಗಳು ನನಗೆ ಇಷ್ಟವಾಗಿದ್ದವು. ಆದರೆ ಅವುಗಳ ನಡುವೆ `ದಿಲ್ ಬೆಚಾರ’ ಚಿತ್ರದ ಸ್ಥಾನವೇ ಬೇರೆ. ಅದಕ್ಕೆ ಕಾರಣ ಸುಶಾಂತ್ ಇನ್ನಿಲ್ಲ ಎನ್ನುವುದಷ್ಟೇ ಅಲ್ಲ. ಅಂಥದೊಂದು ಫೀಲ್ ಗುಡ್ ಮೇಕಿಂಗ್ ಚಿತ್ರದಲ್ಲಿದೆ. ಹಾಲಿವುಡ್ ಚಿತ್ರದ ರಿಮೇಕ್ ಆದರೂ ಕೂಡ ಮೂಲ ಚಿತ್ರಕ್ಕಿಂತ ಚೆನ್ನಾಗಿ, ಚೊಕ್ಕವಾಗಿ ಭಾರತೀಯ ಮನಸುಗಳಿಗೆ ಕತೆಯನ್ನು ದಾಟಿಸುವಂಥ ಚಿತ್ರ ಇದು.
ತುಂಬ ನೀಟಾಗಿರುವ ಚಿತ್ರ. ಚಿತ್ರದಲ್ಲಿ ನಾಯಕಿ ತುಂಬ ಡಿಪ್ರೆಶನ್ನಲ್ಲಿ ಇರುತ್ತಾಳೆ. ಅವಳಿಗೆ ಸ್ವಲ್ಪ ಅನಾರೋಗ್ಯ ಇರುತ್ತದೆ. ಅದೇ ಕಾರಣದಿಂದ ಅವಳು ಯಾವಾಗಲೂ ಆಕ್ಸಿಜನ್ ನ ಪುಟ್ಟ ಸಿಲಿಂಡರನ್ನು ಜತೆಯಲ್ಲೇ ಇರಿಸಿಕೊಂಡಿರುತ್ತಾಳೆ. ಅವಳ ಜೀವನದಲ್ಲಿ ಇವನು ಒಂದು ಗೇಮ್ ಚೇಂಜರ್ ಹಾಗೆ ಪ್ರವೇಶಿಸುತ್ತಾನೆ. ಆದರೆ ನಾಯಕನಿಗೆ ಕೂಡ ಕಾಲಿನ ತೊಂದರೆ ಇರುತ್ತದೆ. ಹಾಗಾಗಿ ಕೃತಕ ಕಾಲಿನ ಜೋಡಣೆ ಮಾಡಲಾಗಿದ್ದರೂ ಇತರರಿಗಿಂತಲೂ ಉತ್ಸಾಹದ ಯುವಕ. ಅವರಿಬ್ಬರೂ ಒಂದಲ್ಲ ಒಂದು ನ್ಯೂನತೆಗಳನ್ನು ಹೊಂದಿರುವ, ಅದರಿಂದ ಹೊರಬರಲು ಬಯಸುವ ಖಿನ್ನತಾ ನಿವಾರಣೆಯ ಕಾಲೇಜ್ ವಿದ್ಯಾರ್ಥಿಗಳು ಎನ್ನಬಹುದು. ಆದರೆ ಅಲ್ಲಿಯೂ ಡಿಪ್ರೆಶನ್ ಮೂಡಲ್ಲೇ ಇರುವ ನಾಯಕಿಯನ್ನು ಬದಲಾಯಿಸುವ ಯುವಕನಾಗಿ ಸುಶಾಂತ್ ಆಪ್ತವಾಗುತ್ತಾರೆ. ಆತನೋರ್ವ ರಜನಿಕಾಂತ್ ಫ್ಯಾನ್. ಇದರ ನಡುವೆ ಆಕೆಗೆ ಒಬ್ಬ ಗಾಯಕನ ಹಾಡುಗಳನ್ನು ತುಂಬಾನೇ ಇಷ್ಟಪಟ್ಟಿರುತ್ತಾಳೆ. ಆದರೆ ಆತ ಹಾಡುಗಳನ್ನುಆತ ಹಠಾತ್ತಾಗಿ ಹಾಡುವುದನ್ನು ನಿಲ್ಲಿಸಿರುತ್ತಾನೆ. ಅದು ಯಾಕೆ? ಏನು ಎನ್ನುವ ಕುತೂಹಲ ಆಕೆಯಲ್ಲಿರುತ್ತದೆ. ಆಕೆಗಾಗಿ ಆತನ ಬಗ್ಗೆ ಅಧ್ಯಯನ ಮಾಡುವ ಸುಶಾಂತ್ ಆತ ಪ್ಯಾರಿಸ್‌ನಲ್ಲಿರುವುದನ್ನು ತಿಳಿದು ಅಲ್ಲಿಗೆ ಕರೆದೊಯ್ಯುತ್ತಾನೆ. ಒಟ್ಟಿನಲ್ಲಿ ಇದು ಒಂದು ಕ್ಲಾಸಿಕ್ ಸಿನಿಮಾ.
ಆರಂಭದಲ್ಲಿ ಚಿತ್ರ ತಮಾಷೆಯಲ್ಲೇ ಸಾಗುತ್ತದೆ. ಆದರೆ ಸೆಕೆಂಡ್ ಹಾಫ್ ತಲುಪುತ್ತಿದ್ದ ಹಾಗೆ ಒಂದು ರೀತಿ ಟ್ರ್ಯಾಜಿಕ್ ನತ್ತ ಹೊರಳುತ್ತದೆ. ಪ್ರತಿಯೊಂದು ಕ್ಯಾರೆಕ್ಟರೈಸೇಶನ್ ತುಂಬ ಚೆನ್ನಾಗಿದೆ. ನಾಯಕಿಯಾಗಲೀ ಅಥವಾ ಆಕೆಯ ತಂದೆ ತಾಯಿಯ ಪಾತ್ರವನ್ನು ನಿಭಾಯಿಸಿದವರಾಗಲೀ ಚಿತ್ರ ನೋಡುತ್ತಲೇ ಆಪ್ತವಾಗುತ್ತಾರೆ. ಚಿತ್ರ ನೋಡುತ್ತಿದ್ದರೆ ನವ ನಾಯಕಿ, ನವ ನಿರ್ದೇಶಕ ಎನ್ನುವುದು ನೆನಪೇ ಆಗುವುದಿಲ್ಲ. ಗಾಯಕನ ಪಾತ್ರದಲ್ಲಿ ಸೈಫ್ ಅಲಿಖಾನ್ ಒಂದು ದೃಶ್ಯದಲ್ಲಿ ಬಂದು ಹೋಗುತ್ತಾರೆ. ಬರುವುದು ಒಂದೇ ದೃಶ್ಯದಲ್ಲಾದರೂ ಆ ಸನ್ನಿವೇಶವನ್ನು ನಿರ್ದೇಶಕರು ತುಂಬ ಚೆನ್ನಾಗಿ ತೆಗೆದಿದ್ದಾರೆ. ಎಲ್ಲೋ ಒಂದು ಕಡೆ `ಅಮೃತಧಾರೆ’ಯಲ್ಲಿ ಅಮಿತಾಭ್ ಬಂದು ಹೋದ ನೆನಪಾಗುತ್ತದೆ. ಆದರೆ ಅದರೊಂದಿಗೆ ಹೆಚ್ಚಿದ ಹೋಲಿಕೆಗಳು ಇಲ್ಲಿಲ್ಲ. ಕ್ಲೈಮ್ಯಾಕ್ಸ್ ನಲ್ಲಿ ಒಳ್ಳೆಯ ಟ್ವಿಸ್ಟ್ ಇದೆ. ಸುಶಾಂತ್ ಪಾತ್ರವೇ ಆಗಿ ಜೀವಿಸಿದಂತೆ ಕಾಣಿಸುತ್ತದೆ. ಆದರೆ ಈ ಹೊತ್ತಲ್ಲಿ ಅದನ್ನು ಒಳ್ಳೆಯದು ಎನ್ನಬೇಕೋ, ವಿಧಿ ವಿಪರ್ಯಾಸ ಎನ್ನಬೇಕೋ ತಿಳಿಯದಂತಾಗಿದೆ. ಒಟ್ಟಿನಲ್ಲಿ ಸಿನಿಮಾ ತುಂಬಾನೇ ಹೃದಯಸ್ಪರ್ಶಿಯಾಗಿದೆ.
ಶಶಿಕರ ಪಾತೂರು