ಮೈಸೂರು, ಅ. 29: ಕೋವಿಡ್ ಕಾರಣದಿಂದಾಗಿ ಈ ಬಾರಿ ಚಾಮುಂಡಿಬೆಟ್ಟದಲ್ಲಿ ಮಂಗಳವಾರ ಸರಳ ಹಾಗೂ ಸಾಂಪ್ರದಾಯಿಕ ಚಾಮುಂಡೇಶ್ವರಿ ರಥೋತ್ಸವ ನೆರವೇರಿಸಲಾಯಿತು.
ಚಾಮುಂಡಿಬೆಟ್ಟಕ್ಕೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭೇಟಿ ನೀಡಿ, ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಪ್ರತಿ ವರ್ಷ ದಸರಾ ಮುಗಿದ ಬಳಿಕ ರಥೋತ್ಸವ ನಡೆಯುತ್ತಿದೆ. ಕೋವಿಡ್‌ನಿಂದಾಗಿ ಈ ಬಾರಿ ದೊಡ್ಡ ರಥದ ಬದಲು ಚಿಕ್ಕ ತೇರಿನಲ್ಲಿ ಮೆರವಣಿಗೆ ನಡೆಸಲಾಯಿತು. ಅಲ್ಲದೇ, ಸಾರ್ವಜನಿಕರಿಗೆ ಪ್ರವೇಶಾವಕಾಶ ನಿರ್ಬಂಧಿಸಲಾಗಿತ್ತು. ಆ ಮೂಲಕ ಈ ಬಾರಿ ಸರಳ ರೀತಿಯಲ್ಲಿ ರಥೋತ್ಸವ ನೆರವೇರಿಸಲಾಯಿತು.
ರಥೋತ್ಸವದ ನಂತರ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸರ್ಕಾರಿ ಉತ್ತನಹಳ್ಳಿಯ ಜ್ವಾಲಾಮುಖಿ ತ್ರಿಪುರ ಸುಂದರಿ ಅಮ್ಮನವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ನಂಜನಗೂಡಿಗೆ ತೆರಳಿದರು. ಶಾಸಕರಾದ ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್, ಎಲ್.ನಾಗೇಂದ್ರ ಹಾಗೂ ಇತರರು ಪಾಲ್ಗೊಂಡಿದ್ದರು.