ಬೆಂಗಳೂರು, ಅ. 30: ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಸಮೀಪಿಸಿದ್ದು, ಅಭ್ಯರ್ಥಿಗಳ ಪರವಾಗಿ ಪಕ್ಷಗಳ ಪ್ರಚಾರ ಭರಾಟೆ ಸಾಗಿದೆ. ಆರ್.ಆರ್.ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರವಾಗಿ ಇಂದು ನಟ ದರ್ಶನ್ ತೂಗುದೀಪ ಪ್ರಚಾರ ನಡೆಸಿದರು.
ಈ ವೇಳೆ ಮಾತನಾಡಿದ ದರ್ಶನ್, ʻಕೊರೊನಾ ಸಂಕಷ್ಟದ ಸಮಯದಲ್ಲಿ ಬಡಜನರಿಗೆ ಅಕ್ಕಿ-ಆಹಾರ ಕಿಟ್ ನೀಡಿರುವುದು ದೊಡ್ಡತನ. ಮುನಿರತ್ನ ಅವರ ದೊಡ್ಡತನ ಗೌರವಿಸಿ ಅವರ ಪರವಾಗಿ ಪ್ರಚಾರಕ್ಕೆ ಬಂದಿದ್ದೇನೆ. ಮಾನವೀಯ ದೃಷ್ಟಿಯಿಂದ ಪ್ರಚಾರ ಮಾಡುತ್ತಿದ್ದೇನೆ. ನಾನು ಯಾವುದೇ ಪಕ್ಷ ನೋಡಿ ಪ್ರಚಾರಕ್ಕೆ ಹೋಗುತ್ತಿಲ್ಲ. ವ್ಯಕ್ತಿ ನೋಡಿ ಪ್ರಚಾರ ಮಾಡುತ್ತಿದ್ದೇನೆʼ ಎಂದು ಹೇಳಿದರು.
ದರ್ಶನ್ ಅವರು ವಾಹನದಲ್ಲಿ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಿದರು. ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ ದರ್ಶನ್ ಅಭಿಮಾನಿಗಳು ಸ್ಥಳದಲ್ಲಿ ನೆರೆದಿದ್ದರು. ಕೊರೊನಾ ಜಾಗೃತಿ ಕುರಿತು ದರ್ಶನ್ ಅಭಿಮಾನಿಗಳಿಗೆ ಕಿವಿಮಾತು ಹೇಳಿದರು. ಇದೇ ನವೆಂಬರ್ 3 ರಂದು ಆರ್.ಆರ್.ನಗರ ಹಾಗೂ ಶಿರಾ ಕ್ಷೇತ್ರಗಳ ಉಪಚುನಾವಣೆ ನಡೆಯಲಿದೆ.