ಕೊರೊನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿರುವ 1.7 ಲಕ್ಷ ಕೋಟಿ ಪರಿಹಾರ ಪ್ಯಾಕೇಜ್, ಆಹಾರ ಮತ್ತು ಆರೋಗ್ಯ ಭದ್ರತೆ ಬಲಪಡಿಸಲು ಸಾಲದಾಗಲಿದೆ. ಹಾಗೆಯೇ ಅಗತ್ಯ ಸೇವೆಗಳ ಪೂರೈಕೆ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸದೆ ಇದ್ದಲ್ಲಿ ಕೃತಕ ಅಭಾವ ದೊಡ್ಡ ಪ್ರಮಾಣದಲ್ಲಿ ಸೃಷ್ಟಿಯಾಗುವ ಸಾಧ್ಯತೆಗಳು ಇವೆ.
ಪರಿಹಾರ ಪ್ಯಾಕೇಜ್ ಸುತ್ತ ಚರ್ಚೆಗಳನ್ನಾರಂಭಿಸಿರುವ ಆರ್ಥಿಕ ಮತ್ತು ಸಾಮಾಜಿಕ ತಜ್ಞರು,ಬಡತನ ರೇಖೆ ಮತ್ತು ಬಡತನ ರೇಖೆಗಿಂತ ಕೆಳಗಿರುವವರಿಗೆ ಆಹಾರ ಮತ್ತು ಆರೋಗ್ಯ ಭದ್ರತೆಯನ್ನು ಪರಿಣಾಮಕಾರಿಯಾಗಿ ಒದಗಿಸುವುದು ಅಷ್ಟು ಸುಲಭದ ಮಾತಲ್ಲ. ಉತ್ಪಾದನೆ,ಪೂರೈಕೆ, ಸಾಗಾಣಿಕೆ ಮತ್ತು ವಿತರಣೆಯಲ್ಲಿ ಸ್ವಲ್ಪಮಟ್ಟಿನ ವ್ಯತ್ಯಯಗಳಾದರೂ ಸಾಮಾಜಿಕ ವಲಯದಲ್ಲಿ ಅಶಾಂತಿ ಎದುರಾದರೂ ಅಚ್ಚರಿಯೇನಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಾರ್ವತ್ರಿಕ ಪಡಿತರ ವ್ಯವಸ್ಥೆ ಅಥವಾ ಪದ್ಧತಿಯನ್ನು ತಕ್ಷಣವೇ ಪರಿಣಾಮಕಾರಿಯಾಗಿ ತಲುಪುವುದು ಕಷ್ಟಕರ ಎಂದು ಹೇಳುತ್ತಿರುವ ಆರ್ಥಿಕ ತಜ್ಞರು,ಲಾಕ್ ಡೌನ್ ಇನ್ನಷ್ಟು ತಿಂಗಳುಗಳ ಕಾಲ ವಿಸ್ತರಣೆಯಾಗಿದ್ದೆ ಆದಲ್ಲಿ ವಿಶೇಷವಾಗಿ ಬೃಹತ್ ಮತ್ತು ಮಧ್ಯಮ ನಗರಗಳಲ್ಲಿ ಒಪ್ಪತ್ತಿನ ಗಂಜಿಗೆ ಪರದಾಡುವ ಸ್ಥಿತಿ ಎದುರಾಗಲಿದೆ ಎಂದು ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ಅರ್ಥಿಕ ತಜ್ಞರ ಪ್ರಕಾರ ಸಾಮಾಜಿಕ ಭದ್ರತೆ ಕಾರ್ಯಕ್ರಮಗಳನ್ನು 1.74 ಲಕ್ಷ ಕೋಟಿ ರೂಪಾಯಿಯಲ್ಲಿ ಅನುಷ್ಠಾನಗೊಳಿಸಲು ಸಾಧ್ಯವಿಲ್ಲ. ಆಹಾರ ಮತ್ತು ಆರೋಗ್ಯ ಭದ್ರತೆ ದೃಷ್ಟಿಯಿಂದ ಈ ಪ್ಯಾಕೇಜ್ ಸಾಲದು ಎನ್ನುತ್ತಾರೆ.
ಮುಂಜಾಗೃತಾ ಭಾಗವಾಗಿ ಲಾಕ್ ಡೌನ್ ಘೋಷಿಸಿರುವ ಕೇಂದ್ರ ಮತ್ತು ರಾಜ್ಯಸರ್ಕಾರ, ಅಸಂಖ್ಯ ದಿನಗೂಲಿ ನೌಕರರು ಮತ್ತು ಸಂಘಟಿತ ವಲಯದ ಕಾರ್ಮಿಕರು ಊಹಿಸಲಾಗದ ಸಂಕಷ್ಟಗಳಲ್ಲಿ ಸಿಲುಕಲಿದ್ದಾರೆ. ಇದರ ತೀವ್ರತೆಯನ್ನು ಅರಿಯದ ಕೇಂದ್ರ ಮತ್ತು ರಾಜ್ಯ ಸರ್ಕಾರ ಏಪ್ರಿಲ್ ಮತ್ತು ಮೇ ತಿಂಗಳಿಗೆ ಒಮ್ಮೆಲೇ 10 ಕೆಜಿ ಅಕ್ಕಿ ಮತ್ತು 4 ಕೆ ಜಿ ಗೋಧಿ ನೀಡುವ ಬಗ್ಗೆ ಇನ್ನೂ ಸ್ಪಷ್ಟತೆ ಹೊಂದಿಲ್ಲ ಎಂದಿದ್ದಾರೆ.