ಇಂಜಿನಿಯರಿಂಗ್ ಪದವಿ ಹೊಂದುವುದು ಇಂದಿನ ಯುವ ಪೀಳಿಗೆಯಲ್ಲಿ ಹೆಚ್ಚಾಗಿ ಕಂಡು ಬರುವ ಆಸಕ್ತಿಯಾಗಿದೆ..ಆದರೆ ಇಂಜಿನಿಯರ್ ಗಳ ಸಂಖ್ಯೆ ಹೆಚ್ಚುತ್ತಿದ್ದು, ಅವಕಾಶಗಳ ಕೊರತೆ ಕಾಡುವ ಹಂತ ತಲುಪಿದೆ..ಆದರೆ ಇಂತಹ ಅನೇಕ ಪ್ರತಿಭಾವಂತ ಇಂಜಿನಿಯರ್ ಗಳಿಗೆ ರಾಜ್ಯ ಸರ್ಕಾರ ಹೊಸ ಅವಕಾಶವನ್ನು ಕಲ್ಪಿಸೋದಕ್ಕೆ ಚಿಂತನೆ ನಡೆಸಿದೆ.
ಕರ್ನಾಟಕ ರಾಜ್ಯ ಸರ್ಕಾರವು ಇಂಜಿನಿಯರಿಂಗ್ ಪದವೀಧರರನ್ನು ಶಿಕ್ಷಕ ಹುದ್ದೆಗೆ ಪರಿಗಣಿಸಲು ಚಿಂತನೆ ನಡೆಸಿದೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಹಂತದಲ್ಲಿನ ಸರಕಾರಿ ಶಾಲೆಗಳಲ್ಲಿ ವಿಜ್ಞಾನ ಹಾಗೂ ಗಣಿತ ಶಿಕ್ಷಕರ ಕೊರತೆ ಹೆಚ್ಚಿದ್ದು, ಅದನ್ನು ಬಗೆಹರಿಸುವ ದೃಷ್ಟಿಯಿಂದ ಇಂಜಿನಿಯರಿಂಗ್ ಪದವೀಧರರಿಗೆ ಬೋಧನೆಗೆ ಅವಕಾಶ ಕಲ್ಪಿಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆಯಂತೆ. ಅಂಕಿ-ಸಂಖ್ಯೆಗಳ ಪ್ರಕಾರ 6-8ನೇ ತರಗತಿವರೆಗೆ ಗಣಿತ ಮತ್ತು ವಿಜ್ಞಾನ ಪಾಠ ಮಾಡಲು 5,553 ಶಿಕ್ಷಕರ ಕೊರತೆ ಇದೆ. 4,340 ಇಂಗ್ಲಿಷ್ ಶಿಕ್ಷಕರ ಕೊರತೆ ಇದೆ. ಮೂಲ ವಿಜ್ಞಾನದಲ್ಲಿ ಪದವಿ ನಂತರ B.ed ತೇರ್ಗಡೆಹೊಂದಿ, ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ (TET) ಅರ್ಹತೆ ಪಡೆದವರನ್ನು ಮಾತ್ರ ಸರ್ಕಾರಿ ಶಾಲೆಗಳ ಶಿಕ್ಷಕರ ನೇಮಕಕ್ಕೆ ಪರಿಗಣಿಸಲಾಗುತ್ತಿದೆ. ಆದರೆ, ವಿಜ್ಞಾನ ವಿಷಯದಲ್ಲಿ ಪದವಿ ಪಡೆದವರುTET ಬರೆಯಲು ಗಣಿತ, ರಸಾಯನಶಾಸ್ತ್ರ ಹಾಗೂ ಭೌತಶಾಸ್ತ್ರ ವಿಷಯಗಳಲ್ಲಿ ಕನಿಷ್ಠ ಶೇ.50 ಅಂಕಗಳನ್ನು ಪಡೆದಿರಬೇಕು. ಈ ನಿಯಮದ ಕಾರಣದಿಂದ ಹೆಚ್ಚಿನ ಅಭ್ಯರ್ಥಿಗಳು TET ಪರೀಕ್ಷೆಯನ್ನು ತೆಗೆದುಕೊಳ್ಳುತ್ತಿಲ್ಲ, ಅರ್ಹತೆಯನ್ನು ಪಡೆಯುತ್ತಿಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್ ಉಮಾಶಂಕರ್ ಅಭಿಪ್ರಾಯ ತಿಳಿಸಿದ್ದಾರೆ.
ಪ್ರಸ್ತುತ ಗಣಿತ ಹಾಗು ವಿಜ್ಞಾನ ವಿಷಯ ಹಿನ್ನೆಲೆಯುಳ್ಳ B.ed ಪೂರ್ಣಗೊಳಿಸಿರುವ ಇಂಜಿನಿಯರಿಂಗ್ ಪದವೀಧರರಿಗೆ ಲ್ಯಾಟರಲ್ ಎಂಟ್ರಿ ನೀಡುವ ಮೂಲಕ ಖಾಲಿ ಇರುವ ಸ್ಥಾನಗಳನ್ನು ತುಂಬುವ ಉದ್ದೇಶವನ್ನು ರಾಜ್ಯ ಸರ್ಕಾರ ಹೊಂದಿದೆ. ಶೀಘ್ರವೇ ಈ ಕುರಿತು ನಿರ್ಧಾರ ಕೈಗೊಳ್ಳಲು ಚಿಂತನೆ ನಡೆಸಲಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಆದರೆ ಈ ಕುರಿತ ಅಂತಿಮ ನಿರ್ಧಾರವಾಗಿಲ್ಲ ಎಂದು ಇಲಾಖೆ ಮೂಲಗಳು ತಿಳಿಸಿವೆ.