ಹಾಸನ, ನ. 13: ಆಶ್ರಯಮನೆ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ ದಂಪತಿ ಟವರ್ ಏರಿ ಕುಳಿತ ಘಟನೆ ಹಾಸನ ಜಿಲ್ಲೆಯ ಬೇಲೂರಿನ ನೆಹರು ನಗರದಲ್ಲಿ ನಡೆದಿದೆ.
ಇಲ್ಲಿನ ನಾರಾಯಣಪುರದ ಮೋಹನ್ ರಾಜ್ ಹಾಗೂ ಪತ್ನಿ ಚಂದನ ಟವರ್ ಏರಿ ಕುಳಿತವರು. ಬಂಟೇನಹಳ್ಳಿ ಗ್ರಾಮ ಪಂಚಾಯಿತಿಯಿಂದ ನಮಗೆ ಮನೆ ನೀಡುವ ಭರವಸೆ ನೀಡಲಾಗಿತ್ತಾದರೂ, ಈವರೆಗೂ ನಮಗೆ ಮನೆ ನೀಡಿಲ್ಲ. ಹೀಗಾಗಿ ನಮಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದ ದಂಪತಿ, ತಮ್ಮ ಬೇಡಿಕೆ ಈಡೇರುವವರೆಗೂ ಯಾವುದೇ ಕಾರಣಕ್ಕೂ ಟವರ್ ಬಿಟ್ಟು ಕೆಳಗಿಳಿಯುವುದಿಲ್ಲ ಎಂದು ಪಟ್ಟುಹಿಡಿದರು.
ಅಲ್ಲದೇ, ಜಿಲ್ಲಾಧಿಕಾರಿಗಳು ಸ್ಥಳಕ್ಕಾಗಮಿಸಿ ತಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಬೇಡಿಕೆ ಇಟ್ಟ ದಂಪತಿ, ನ್ಯಾಯ ಸಿಗದಿದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ, ದಂಪತಿಯ ಮನವೊಲಿಸಿ ಇಬ್ಬರನ್ನು ಟವರ್ ನಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ.