ಬೆಳಗಾವಿ,ಸೆ.09: ಮಕ್ಕಳು ಉತ್ತಮ ಹಾದಿಯಲ್ಲಿ ನಡೆಯಲಿ ಎಂದು ಹೆತ್ತವರು ಯೋಚಿಸೋದೇ ತಪ್ಪಾ..? ಈ ಪ್ರಶ್ನೆ ಸದ್ಯ ಹುಟ್ಟಿಕೊಳ್ಳಲು ಕಾರಣ ಬೆಳಗಾವಿಯ ಕಾಕತಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಕ್ರೂರ ಘಟನೆ. ಪಬ್ ಜಿ ಆಡಬೇಡ ಎಂದಿದ್ದ ತಂದೆಯನ್ನೇ ಮಗ ಬರ್ಬರವಾಗಿ ಕೊಲೆ ಮಾಡಿಬಿಟ್ಟಿದ್ದ.
ಬೆಳಗಾವಿಯ ಸಿದ್ದೇಶ್ವರ ನಗರ ನಿವಾಸಿ 59ರ ವಯಸ್ಸಿನ ಶಂಕ್ರಪ್ಪ, ಪೊಲೀಸ್ ಇಲಾಖೆಯ ಎಎಸ್‍ಐ ಆಗಿದ್ದು, ಮೂರು ತಿಂಗಳ ಹಿಂದಷ್ಟೇ ನಿವೃತ್ತಿ ಹೊಂದಿದ್ದ. ಕೆಲ ದಿನಗಳಿಂದ ಮನೆಯಲ್ಲಿ ಇಂಟರ್ ನೆಟ್ ಆತಿಯಾಗಿ ಬಳಕೆಯಾಗುತ್ತಿರುವ ಬಗ್ಗೆ, ಮಗ ರಘುವೀರ್ ಕಮ್ಮಾರ್ ಪಬ್ ಜಿ ಆಟದ ಗೀಳಿಗೆ ಬಿದ್ದಿರುವ ಬಗ್ಗೆ ಅಪ್ಪ-ಮಗನ ನಡುವೆ ಮಾತುಕತೆ ನಡೆಯುತ್ತಲೇ ಇತ್ತು. ಮಗನ ಬಳಿ ಪಬ್ ಜಿ ಆಡದಂತೆ ಶಂಕ್ರಪ್ಪ ಬುದ್ಧಿವಾದ ಹೇಳಿದ್ದ. ರಿಚಾರ್ಜ್ ಮಾಡಿಸಲು ದುಡ್ಡು ಕೇಳಿದಾಗ, ಕೊಡದೆ ಈ ಗೀಳಿನಿಂದ ಹೊರಬರಲು ತಿಳಿಹೇಳಿದ್ದ. ಇದಕ್ಕೆ ಕೋಪಗೊಂಡ ರಘುವೀರ್ ನಿನ್ನೆ ರಾತ್ರಿಯ ವೇಳೆ ಹೆತ್ತ ತಾಯಿಯನ್ನು ಕೋಣೆಯಲ್ಲಿ ಕೂಡಿಹಾಕಿ, ಮಲಗಿದ್ದ ತಂದೆಯ ಕತ್ತು ಕುಯ್ದು, ಕೈಕಾಲುಗಳನ್ನು ಬೇರ್ಪಡಿಸಿ ಕ್ರೂರತೆ ಮೆರೆದಿದ್ದಾನೆ. ಆರೋಪಿ ರಘುವೀರನನ್ನು ಕಾಕತಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.