ಶ್ರೀನಗರ: ಜಮ್ಮು ಕಾಶ್ಮೀರದ ದೃಷ್ಣಾ ಘಾಟಿ ಸೆಕ್ಟರ್ ಪ್ರದೇಶದಲ್ಲಿ ಪಾಕಿಸ್ತಾನ ಯೋಧರು ಕದನ ವಿರಾಮವನ್ನು ಉಲ್ಲಂಘಿಸಿ ಬುಧವಾರ ತಡರಾತ್ರಿ ಗುಂಡಿನ ದಾಳಿ ನಡೆಸಿದ ಪರಿಣಾಮವಾಗಿ ಓರ್ವ ಭಾರತೀಯ ಯೋಧ ಹುತಾತ್ಮರಾಗಿದ್ದಾರೆ.
ಪೂಂಚ್ ಜಿಲ್ಲೆಯ ಕೃಷ್ಣಾ ಘಾಟಿ ಸೆಕ್ಟರ್ ನಲ್ಲಿ ಪಾಕಿಸ್ಥಾನಿ ಸೇನಾ ಪಡೆ ನಿರಂತರವಾಗಿ ಗುಂಡಿನ ದಾಳಿ ನಡೆಸುತ್ತಿದೆ. ಈ ದಾಳಿಗೆ ಪ್ರತಿಯಾಗಿ ಭಾರತೀಯ ಸೇನಾ ಪಡೆಯು ದಾಳಿ ನಡೆಸಿರುವುದಾಗಿ ಮೂಲಗಳು ತಿಳಿಸಿವೆ. ಪಾಕ್ ಗುಂಡಿನ ದಾಳಿಗೆ ಲ್ಯಾನ್ಸ್ ನಾಯಕ್ ಕರ್ನೈಲ್ ಸಿಂಗ್ ಹುತಾತ್ಮರಾಗಿದ್ದಾರೆ. ಲೆಫ್ಟಿನೆಂಟ್ ಕರ್ನಲ್ ದೇವೇಂದ್ರ ಆನಂದ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಹುತಾತ್ಮ ಲ್ಯಾನ್ಸ್ ನಾಯಕ್ ಕರ್ನೈಲ್ ಸಿಂಗ್ ಅವರ ಪಾರ್ಥಿವ ಶರೀರವನ್ನು ಜನರಲ್ ಕಮಾಂಡಿಂಗ್ ಅಧಿಕಾರಿಗಳು ಹಾಗೂ ಎಲ್ಲಾ ರ್ಯಾಂಕ್ ಶ್ರೇಣಿಯ ಅಧಿಕಾರಿಗಳು ಗೌರವ ಸಲ್ಲಿಸಿದ್ದು, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿರುವುದಾಗಿ ವರದಿ ತಿಳಿಸಿದೆ.