ಮೌಂಟ್ ಮೌಂಗನ್ಯುಯಿ, ಡಿ. 27: ಕೇನ್ ವಿಲಿಯಂಸನ್(129) ಶತಕ ಹಾಗೂ ಇತರೆ ಬ್ಯಾಟ್ಸ್‌ಮನ್‌ಗಳ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಪ್ರವಾಸಿ ಪಾಕಿಸ್ತಾನ ವಿರುದ್ಧದ ಪ್ರಥಮ ಟೆಸ್ಟ್‌ನಲ್ಲಿ ನ್ಯೂಜಿ಼ಲೆಂಡ್ ಸಂಪೂರ್ಣ ಮೇಲುಗೈ ಸಾಧಿಸಿದೆ.
ಇಲ್ಲಿನ ಬೇ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವೂ ಕಿವೀಸ್ ಆಟಗಾರರು ಉತ್ತಮ ಪ್ರದರ್ಶನ ನೀಡಿದರು. ನಿನ್ನೆಯ ಮೊತ್ತ 3 ವಿಕೆಟ್ ನಷ್ಟಕ್ಕೆ 222 ರನ್‌ಗಳಿಂದ ದಿನದಾಟ ಆರಂಭಿಸಿದ ನ್ಯೂಜಿ಼ಲೆಂಡ್ ತಂಡಕ್ಕೆ ನಾಯಕ ವಿಲಿಯಂಸನ್(129) ಆಸರೆಯಾದರು. ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ ವಿಲಿಯಂಸನ್, ಆಕರ್ಷಕ ಶತಕ ಬಾರಿಸಿ ಮಿಂಚಿದರು. ಇವರಿಗೆ ಉತ್ತಮ ಸಾಥ್ ನೀಡಿದ ಹೆನ್ರಿ ನಿಕೋಲ್ಸ್(56) ರನ್‌ಗಳಿಸಿ ಮಿಂಚಿದರು.
ಇವರಿಬ್ಬರ ನಿರ್ಗಮನದ ನಂತರ ಕಣಕ್ಕಿಳಿದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ವೆಟ್ಲಿಂಗ್(73) ಆಕರ್ಷಕ ಅರ್ಧಶತಕ ಗಳಿಸಿದರೆ. ಸ್ಯಾಟ್ನರ್(19), ಜೇಮಿಸನ್(32) ಹಾಗೂ ವ್ಯಾಗ್ನರ್(19) ಉಪಯುಕ್ತ ಕಾಣಿಕೆ ನೀಡಿದರು. ಪರಿಣಾಮ ನ್ಯೂಜಿ಼ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 431 ರನ್‌ಗಳಿಸಿತು. ಪಾಕಿಸ್ತಾನದ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ಶಹೀನ್ ಅಫ್ರೀದಿ 4, ಯಾಸಿರ್ ಶಾ 3 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.
ನ್ಯೂಜಿ಼ಲೆಂಡ್ ತಂಡದ ಮೊದಲ ಇನ್ನಿಂಗ್ಸ್ ಮೊತ್ತಕ್ಕೆ ಪ್ರತಿಯಾಗಿ ಇನ್ನಿಂಗ್ಸ್ ಆರಂಭಿಸಿದ ಪಾಕಿಸ್ತಾನಕ್ಕೆ ನಿರೀಕ್ಷಿತ ಆರಂಭ ದೊರೆಯಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ಮಸೂದ್(10) ರನ್‌ಗಳಿಸಿ ಪೆವಿಲಿಯನ್ ಸೇರಿದರು. 2ನೇ ದಿನದಂತ್ಯಕ್ಕೆ ಪಾಕಿಸ್ತಾನ 1 ವಿಕೆಟ್ ನಷ್ಟಕ್ಕೆ 30 ರನ್‌ಗಳಿಸಿದ್ದು, 401 ರನ್‌ಗಳ ಹಿನ್ನಡೆ ಹೊಂದಿದೆ. ಪಾಕ್ ಪರ ಅಬಿದ್ ಅಲಿ(19), ಅಬ್ಬಾಸ್(0) ಕಣದಲ್ಲಿದ್ದಾರೆ.