ನವದೆಹಲಿ, ನ. 13: ಕಳೆದ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು-ಕಾಶ್ಮೀರದ ರಜೌರಿ ಜಿಲ್ಲೆ ಹತ್ತಿರದ ಗಡಿನಿಯಂತ್ರಣ ರೇಖೆಯ ಸಮೀಪ ಯೋಧರೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಿದ್ದರು. ಈ ಬಾರಿಯೂ ದೀಪಾವಳಿ ಹಬ್ಬವನ್ನು ಗಡಿ ಪ್ರದೇಶದಲ್ಲಿರುವ ದೇಶದ ಯೋಧರ ಜತೆಗೆ ಆಚರಿಸುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ.
ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಪ್ರತಿವರ್ಷ ದೀಪಾವಳಿಯನ್ನು ನರೇಂದ್ರ ಮೋದಿ ಅವರು ಗಡಿಪ್ರದೇಶಕ್ಕೆ ಭೇಟಿ ಕೊಟ್ಟು ಸೈನಿಕರ ಜತೆ ಆಚರಿಸುತ್ತಿದ್ದರು. ವರದಿಯ ಪ್ರಕಾರ, ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಕೂಡಾ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದಿದೆ. ಇದಕ್ಕೂ ಮೊದಲು ಪ್ರಧಾನಿ ಮೋದಿ ಅವರು ದೀಪಾವಳಿ ಹಿನ್ನೆಲೆಯಲ್ಲಿ ಪಾಕಿಸ್ತಾನ, ಚೀನಾ ಗಡಿಪ್ರದೇಶದ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಯೋಧರ ಜತೆ ಮಾತುಕತೆ ನಡೆಸಿ ಸಿಹಿ ಹಂಚಲಿದ್ದಾರೆ ಎಂದು ವರದಿಯಿಂದ ತಿಳಿದಿದೆ.