ಲಾಕ್ಡೌನ್ ಸಮಯದಲ್ಲಿ ಸಿನಿಮಾ ಪ್ರೇಕ್ಷಕರಿಗೆ ಆಪ್ತವಾಗಿದ್ದೇ ಒಟಿಟಿ ಫ್ಲಾಟ್‌ಫಾರ್ಮ್‌ಗಳು. ಇದೀಗ ಚಿತ್ರಮಂದಿರ ತೆರೆದ ಬಳಿಕವೂ ಒಟಿಟಿಯಲ್ಲಿ ಸಿನಿಮಾ ನೋಡುವ ಆಸಕ್ತಿ ಇರುವವರಿಗೆ ಮತ್ತು ನೇರವಾಗಿ ತಮ್ಮ ಸಿನಿಮಾಗಳನ್ನು ಒಟಿಟಿಗೆ ನೀಡುವವರಿಗೆ ಕೊರತೆ ಇಲ್ಲ. ಅಂಥ ಆಸಕ್ತರನ್ನು ಗಮನದಲ್ಲಿರಿಸಿಕೊಂಡು ಕನ್ನಡದಲ್ಲಿ ಕನ್ನಡಕ್ಕಾಗಿಯೇ ಸ್ಥಾಪಿಸಲ್ಪಡುತ್ತಿರುವುದೇ `ಓನ್ಲಿ ಕನ್ನಡ’.
ಪ್ರಯೋಗ್ ಸ್ಟುಡಿಯೋ ಸಂಸ್ಥೆಯ `Only ಕನ್ನಡ’ ಎನ್ನುವ ಕನ್ನಡದ ಒ.ಟಿ.ಟಿ. ಸಧ್ಯದಲ್ಲೆ ನಾಡಿನ ಜನರ ಮುಂದೆ ತರಲು ಸನ್ನದ್ಧರಾಗಿದ್ದಾರೆ ಪ್ರದೀಪ್ ಮುಳ್ಳೂರು ಹಾಗು ರಜನಿ ಪ್ರದೀಪ್. ಮೊದಲನೆಯದಾಗಿ ನವೆಂಬರ್ ಒಂದರಂದು ಕನ್ನಡದ ಸಿನಿಮಾ ಹಾಗೂ ಕನ್ನಡದ ಕಲಾವಿದರಿಗೆ ಆರ್ಥಿಕ ಅನುಕೂಲಗಳನ್ನು, ಅವಕಾಶಗಳನ್ನು ಒದಗಿಸುವ ಮೂಲಕ ಕನ್ನಡದ ಕಲಾವಿದರಿಗೆ ಕನ್ನಡದ ಕಲಾರಸಿಕರ ಮನ ಮನೆಗಳಲ್ಲಿ ರಂಜಿಸಲು ಸಿದ್ಧರಾಗುತ್ತಿದ್ದಾರೆ.
ಕನ್ನಡದ ಸಿನಿಮಾ,ನಾಟಕ ಸಂಗೀತ ಸಾಹಿತ್ಯ ಹಾಗೂ ಕರುನಾಡಿನ ಎಲ್ಲಾ ಕಲಾಪ್ರಕಾರಗಳನ್ನು ಹಳ್ಳಿಯಿಂದ ದಿಲ್ಲಿವರೆಗೆ, ದೇಶದ ಹಾಗೂ ವಿದೇಶದ ಎಲ್ಲಾ ಕನ್ನಡ ಪ್ರೇಮಿಗಳಿಗೆ ಕನ್ನಡದ ಕಂಪನ್ನು ಮತ್ತೆ ಪಸರಿಸಲು ಮುಂದಾಗಿದ್ದಾರೆ. ಇದರ ಮೊದಲ ಕಾರ್ಯಕ್ರಮಕ್ಕೆ ನವರಾತ್ರಿ ಉತ್ಸವದ ಮೂಲಕ ಚಾಲನೆ ಕೊಡುತ್ತಿದ್ದಾರೆ. ನಾಡಿನ ಸುಪ್ರಸಿದ್ಧ ಕಲಾವಿದರಿಂದ 9 ದಿನ ನವರಾತ್ರಿ ಉತ್ಸವದ ಮೂಲಕ ನಾಡಿಗೆ ನಾಡಿನ ಜನತೆಗೆ ಸುಭಿಕ್ಷೆಯನ್ನು ನೀಡೆಂದು ನಾಡದೇವಿ ತಾಯಿ ಚಾಮುಂಡಿಯನ್ನು ಬೇಡುವ ಮೂಲಕ ನಾಡದೇವಿಗೆ ಕಲಾವಿದರು ಕಲಾಸೇವೆಯನ್ನು ಮಾಡುತ್ತಿದ್ದಾರೆ.
ಕನ್ನಡದ ಆಸಕ್ತ ಕಲಾವಿದರು, ಕನ್ನಡದ ಸಿನಿಮಾ ತಂಡದವರು ಪ್ರಯೋಗ್ ಸ್ಟುಡಿಯೋ ಸಂಸ್ಥೆಯ ಮೂಲಕ ಬರುತ್ತಿರುವ ಓನ್ಲಿ ಕನ್ನಡ ಓ.ಟಿ.ಟಿ ಮೂಲಕ ಸದುಪಯೋಗ ಪಡಿಸಿಕೊಳ್ಳಲು ಸಂಸ್ಥೆಯನ್ನು ಸಂಪರ್ಕಿಸಬಹುದು. ನವೆಂಬರ್ ತಿಂಗಳ 1ನೇ ತಾರೀಕಿನಿಂದ ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಿನಿಮಾಗಳು ಓನ್ಲಿ ಕನ್ನಡದ ಓ.ಟಿ.ಟಿ ಮೂಲಕ ಕನ್ನಡದ ಹಾಗೂ ವಿಶ್ವದ ಜನರಿಗೆ ತಲುಪಲು ಸಿದ್ಧವಾಗಿದೆ.
ಓನ್ಲಿ ಕನ್ನಡ ಓ.ಟಿ.ಟಿ. ಮೂಲಕ ಕನ್ನಡದ ಕಲಾವಿದರಿಗೆ ಸಾಕಷ್ಟು ಪ್ರಮಾಣದಲ್ಲಿ ಅವಕಾಶಗಳನ್ನು ರೂಪಿಸುವ ಮಹದಾಸೆ ಸಂಸ್ಥೆಯ ಮುಖ್ಯಸ್ಥರಲ್ಲಿದೆ.