ಬೆಂಗಳೂರು, ಅ.21: ರಾಜ್ಯ ಸರ್ಕಾರವು ಪ್ರವಾಹ ಸಂತ್ರಸ್ತರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಅತಿವೃಷ್ಟಿಯಿಂದಾಗಿ ಮನೆ ಕಳೆದುಕೊಂಡ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ ನೀಡುವುದಾಗಿ ರಾಜ್ಯ ಸರ್ಕಾರ ಅಧಿಕೃತವಾಗಿ ಘೋಷಣೆ ಹೊರಡಿಸಿದೆ.
ಆಗಸ್ಟ್ ನಿಂದಲೇ ಅನ್ವಯವಾಗುವಂತೆ ಪರಿಹಾರ ಮೊತ್ತದ ಪರಿಷ್ಕರಣೆಗೆ ಆದೇಶ ಹೊರಡಿಸಲಾಗಿದ್ದು, ಪ್ರವಾಹದಲ್ಲಿ ಶೇ.75 ಕ್ಕಿಂತ ಹೆಚ್ಚು ಭಾಗ ಹಾನಿಯಾಗಿದ್ದರೆ ಅಥವಾ ಸಂಪೂರ್ಣ ಮನೆ ಕುಸಿದು ಹೋಗಿದ್ದರೆ 5 ಲಕ್ಷ ರೂ. ಪರಿಹಾರ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಶೇ. 25 ರಿಂದ 75 ರಷ್ಟು ಭಾಗಶಃ ಹಾನಿಯಾದ ಮನೆ ದುರಸ್ತಿ ಮಾಡಲು 3 ಲಕ್ಷ ರೂ. ಪರಿಹಾರ ನೀಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಪ್ರವಾಹದಿಂದಾಗಿ ದಿನಬಳಕೆಯ ವಸ್ತುಗಳನ್ನು ಕಳೆದುಕೊಂಡವರಿಗೆ ಕೇಂದ್ರ ಸರ್ಕಾರ 3,800 ರೂ. ನೀಡುತ್ತದೆ. ಜೊತೆಗೆ ರಾಜ್ಯ ಸರ್ಕಾರ ನೀಡುವ 6,200 ರೂ. ಸೇರಿಸಿ ಒಟ್ಟು 10 ಸಾವಿರ ರೂ.ಗಳನ್ನು ಪ್ರತಿ ಕುಟುಂಬಕ್ಕೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.