ಭಾರತ ದೇಶ ಡಿಜಿಟಲ್ ಯುಗದತ್ತ ದಾಪುಗಾಲು ಹಾಕುತ್ತಿದೆ. ಇಲ್ಲಿ ಎಲ್ಲರಿಗೂ ಅಚ್ಛೇದಿನ್ ಬಂದಿದೆ, ಎಲ್ಲರೂ ಸುಖವಾಗಿ ಬಾಳುತ್ತಿದ್ದಾರೆ ಅಂತ ನಾವು ತಿಳಿದಿದ್ದರೆ ಅದು ನಮ್ಮ ಭ್ರಮೆಯಷ್ಟೇ. ನಮ್ಮ ಭ್ರಮೆಯನ್ನು ಛಿದ್ರಗೊಳಿಸುವ ಭೀಕರ ಚಿತ್ರಣವನ್ನು ವಿಜಯಟೈಮ್ಸ್‌ನ ಕವರ್‌ಸ್ಟೋರಿ ತಂಡ ನಿಮ್ಮ ಮುಂದೆ ಇಡಲಿದೆ. ಈ ಚಿತ್ರಣವನ್ನ ನೋಡಿದಾಗ ನಮ್ಮ ತಲೆ ನಾಚಿಕೆಯಿಂದ ತಗ್ಗಿ ಹೋಗುತ್ತೆ. ಇದು ಕರ್ನಾಟಕದ ಚಿತ್ರಣವಾ ಅಂತ ಶಾಕ್ ಆಗುತ್ತೆ.
ಪ್ರಾಣಿಗಳಿಗಿಂತ ಕಡೆಯಾಗಿದೆ ಬದುಕು :ಹೌದು, ನಮ್ಮ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಚೌಗೂರು ಹಾಡಿಯ ಮಂದಿ ಪ್ರಾಣಿಗಳಿಗಿಂತ ಕಡೆಯಾಗಿ ಜೀವಿಸುತ್ತಿದ್ದಾರೆ. 30 ವರ್ಷಗಳ ಹಿಂದೆ ಕಾಡಲ್ಲಿ ವಾಸಿಸುತ್ತಿದ್ದವರನ್ನ ಅರಣ್ಯ ಇಲಾಖೆಯವರು ಏಕಾಏಕಿ ಹೊರದಬ್ಬಿದ್ರು. ಯಾವುದೇ ಪುನರ್ವಸತಿ ಕಲ್ಪಿಸದೆ ಬೀದಿಪಾಲು ಮಾಡಿದ್ರು. ಹೊರಜಗತ್ತಿನ ಅರಿವಿಲ್ಲದ ಇವರು ಕಂಡ ಖಾಲಿ ಜಾಗದಲ್ಲಿ ಗುಡಿಸಲು ಕಟ್ಟಿ ಬದುಕಲಾರಂಭಿಸಿದ್ರು. ಅಂದು ಯಾವುದೇ ಮೂಲಭೂತ ಸೌಕರ್ಯ ಇಲ್ಲದೆ ಪ್ರಾರಂಭಿಸಿದ ಇವರ ಬದುಕು ಇಂದೂ ಅದೇ ರೀತಿಯಲ್ಲಿದೆ. ಇಂದಿಗೂ ಮುರುಕಲು ಮನೆಯಲ್ಲಿ ಪ್ರಾಣಿಗಳಿಗಿಂತ ಕಡೆಯಾಗಿ ಬದುಕುತ್ತಿದ್ದಾರೆ. ಮನೆಗಳಿಗೆ ಯಾವ ಸುರಕ್ಷತೆಯೂ ಇಲ್ಲ. ಮನೆಗಳಿಗೆ ಗೋಡೆ ಇಲ್ಲ. ಮಾಡಿಟ್ಟ ಅಡುಗೆ ಎಲ್ಲಾ ನಾಯಿ ಪಾಲಾಗುತ್ತಿದೆ. ತುತ್ತು ಅನ್ನಕ್ಕೂ ಇವರು ಪರದಾಡುತ್ತಿದ್ದಾರೆ. ಸರಿಯಾದ ಶಾಲೆಗಳಿಲ್ಲದೆ ಮಕ್ಕಳ ಬಾಳು ಹಾಳಾಗಿ ಹೋಗುತ್ತಿದೆ.
ಹೆಣಹೂಳಲು ಜಾಗವೇ ಇಲ್ಲ:ಚೌಗೂರು ಹಾಡಿಯ ಮಂದಿಯ ಬದುಕು ಎಷ್ಟು ಶೋಚನೀಯವಾಗಿದೆ ಅಂದ್ರೆ ಇವರು ಸತ್ರೆ ಹೂಳಲು ಜಾಗವೇ ಇಲ್ಲ. ಎಲ್ಲೆಲ್ಲೋ ಹೋಗಿ ಕದ್ದು ಮುಚ್ಚಿ ಹೆಣ ಹೂಳೋ ದುಸ್ಥಿತಿ ಇವರದ್ದು. ಇನ್ನು ಹಾಡಿಯ ಹೆಣ್ಣು ಮಕ್ಕಳ ಪಾಡು ಹೇಳ ತೀರದು. ಇಡೀ ಹಾಡಿ ಒಂದೇ ಒಂದು ಶೌಚಾಲಯ ಇಲ್ಲ. ಮಳೆ ಬಂದ್ರೆ ಮನೆಯೊಳಗೆ ನೀರು ನುಗ್ಗುತ್ತೆ. ಅಷ್ಟೇ ಅಲ್ಲ ಹಾವು ಚೇಳು ಇವರ ನಿತ್ಯದ ಅತಿಥಿ. ಸುತ್ತಲೂ ಕೊಳಚೆ ತುಂಬಿ ಹಾಡಿ ರೋಗ ರುಜಿನಗಳ ಗೂಡಾಗಿದೆ.
ಅನ್ನಕ್ಕೂ ಸರ್ಕಾರದ ಕನ್ನ: ಕೊರೋನಾದಿಂದ ಇವರ ಬದುಕು ಇನ್ನಷ್ಟು ಭೀಕರವಾಗಿದೆ. ಎಲ್ಲೂ ಕೂಲಿ ಸಿಗದೆ ಒಂದು ಹೊತ್ತಿನ ಊಟವೂ ಇಲ್ಲದೆ ನಿತ್ಯ ಉಪವಾಸ ಮಲಗೋ ಸ್ಥಿತಿ ಬಂದಿದೆ. ಈ ಸಂದರ್ಭದಲ್ಲಿ ಸಹಾಯಕ್ಕೆ ಬರಬೇಕಾದ ಸರ್ಕಾರ ಇವರ ಅನ್ನಕ್ಕೆ ಕನ್ನ ಹಾಕಿ ದ್ರೋಹ ಮಾಡಿದೆ. ಬಡವರಿಗಾಗಿ ಕೊಡುತ್ತಿದ್ದ ಪಡಿತರಕ್ಕೆ ಕತ್ತರಿ ಹಾಕಿ ಇವರನ್ನು ಹಸಿವಿನಿಂದ ಸಾಯುವಂತೆ ಮಾಡಿದೆ.
ಸತ್ತೇ ಹೋಗಿದೆ ಜಿಲ್ಲಾಡಳಿತ: ಕಳೆದ ಮೂವತ್ತು ವರ್ಷಗಳಿಂದ ಇವರು ತಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಲೇ ಇದ್ದಾರೆ. ಮನಷ್ಯರಂತೆ ಬದುಕಲು ಅವಕಾಶ ಮಾಡಿ ಕೊಡಿ ಅಂತ ಅಂಗಲಾಚಿದ್ರೂ ಯಾವ ಸರ್ಕಾರಗಳಿಗೂ ಇವರ ಕೂಗು ಕೇಳಲಿಲ್ಲ. ಯಾವ ಆಶ್ರಯ ಯೋಜನೆಗಳೂ ಇವರು ಸೂರು ಕೊಡಲು ವಿಫಲವಾದವು. ಸರ್ಕಾರಗಳು ಇವರ ಪಾಲಿಗೆ ಸತ್ತೇ ಹೋಗಿವೆ. ಜಿಲ್ಲಾಡಳಿತಕ್ಕೆ ಕಣ್ಣೇ ಇಲ್ಲ. ಈಗಾಲಾದ್ರೂ ಸರ್ಕಾರ ಈ ಕಾಡು ಮಕ್ಕಳ ಕೂಗು ಕೇಳಿ ಇವರಿಗೆ ಶಾಶ್ವರ ಸೂರು ಕಲ್ಪಿಸಲಿ. ಇವರಿಗೂ ಮನುಷ್ಯರಂತೆ ಬದುಕಲು ಅವಕಾಶ ಮಾಡಿಕೊಡಲಿ.