ಶ್ರೀನಗರ, ಅ. 30: ಜಮ್ಮು ಮತ್ತು ಕಾಶ್ಮೀರ ನಮ್ಮ ದೇಶದ ಗಡಿಭಾಗವಾಗಿದ್ದು, ಇಲ್ಲಿ ಉಗ್ರರ ಧಾಳಿ ಅಧಿಕವಾಗಿದೆ ಎಂದೇ ಹೆಳಬಹುದು. ಅದೇ ರೀತಿ ನಿನ್ನೆ ಈ ಭಾಗದ ಕುಲ್ಲಾಂ ಜಿಲ್ಲೆಯಲ್ಲಿ ಮೂವರು ಬಿಜೆಪಿ ಕಾರ್ಯಕರ್ತರನ್ನು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿರುವುದಾಗಿ ತಿಳಿದು ಬಂದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಹತ್ಯೆಯಾದವರಲ್ಲಿ ಒಬ್ಬರು ಸ್ಥಳೀಯ ಬಿಜೆಪಿ ಯುವ ಮುಖಂಡರಾಗಿದ್ದಾರೆ ಎನ್ನಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಇವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲ ನೀಡದೆ ಮೂವರು ಸಾವಿಗೀಡಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
“ಮೂವರು ಬಿಜೆಪಿ ಕಾರ್ಯಕರ್ತರ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಫಿದಾ ಹುಸೇನ್ ಯಾತೂ (ಬಿಜೆಪಿ ಜಿಲ್ಲಾ ಯುವ ಪ್ರಧಾನ ಕಾರ್ಯದರ್ಶಿ), ಉಮರ್ ರಶೀದ್ ಬೇಗ್ (ಬಿಜೆಪಿ ಕಾರ್ಯಕರ್ತ) ಮತ್ತು ಉಮರ್ ರಂಜಾನ್ ಹಜಮ್ (ಬಿಜೆಪಿ ಕಾರ್ಯಕರ್ತ) ಮೃತರು ಎಂಬುದು ತಿಳಿದು ಬಂದಿದೆ ”ಎಂದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. “ನಮ್ಮ 3 ಯುವ ಕಾರ್ಯಕರ್ತರ ಹತ್ಯೆಯನ್ನು ನಾನು ಖಂಡಿಸುತ್ತೇನೆ. ಅವರು ಜಮ್ಮು ಮತ್ತು ಕಾಶ್ಮೀರಕ್ಕಾಗಿ ಅತ್ಯುತ್ತಮ ಕೆಲಸ ಮಾಡುತ್ತಿದ್ದ ಉದಯೋನ್ಮುಖ ಯುವಕರಾಗಿದ್ದರು. ದುಃಖದ ಈ ಸಮಯದಲ್ಲಿ ನನ್ನ ಸಂತಾಪ ಅವರ ಕುಟುಂಬಗಳೊಂದಿಗೆ ಇದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.