ಚೆನ್ನೈ, ಅ. 27: ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಬಿಜೆಪಿ ನಾಯಕಿ ಹಾಗೂ ಹಿರಿಯ ನಟಿ ಖುಷ್ಬೂ ಸುಂದರ್ ಅವರನ್ನು ಚೆನ್ನೈ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಮನುಸ್ಮೃತಿಯನ್ನು ಉಲ್ಲೇಖಿಸಿ ಮಹಿಳೆಯರ ಕುರಿತು ವಿಸಿಕೆ ಅಧ್ಯಕ್ಷ ತಿರುಮಾಳವನ್ ನೀಡಿದ್ದ ಹೇಳಿಕೆ ಖಂಡಿಸಿ ಚಿದಂಬರಂನಲ್ಲಿ ಬಿಜೆಪಿಯಿಂದ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ವೇಳೆ ಖುಷ್ಬೂ ಹಾಗೂ ಕೆಲವು ಬಿಜೆಪಿ ಕಾರ್ಯಕರ್ತರನ್ನು ಮುತ್ತುಕಾಡು ಬಳಿ ಚೆಂಗಲ್ಪಟ್ಟು ಪೊಲೀಸರು ಬಂಧಿಸಿದ್ದಾರೆ.
ಚಿದಂಬರಂನಲ್ಲಿ ಸೋಮವಾರ ಪ್ರತಿಭಟನೆಗೆ ಪೊಲೀಸರು ನಿರಾಕರಿಸಿದ್ದರು. ಖುಷ್ಬೂ ಸುಂದರ್ ನಂತರ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಘವನ್ ಅವರನ್ನು ಅಥರ್ ಟೋಲ್‌ಗೇಟ್ ಬಳಿ ಪೊಲೀಸರು ಬಂಧಿಸಿದ್ದಾರೆ.
ʻಮುಂಜಾಗ್ರತಾ ಕ್ರಮವಾಗಿ ಇಬ್ಬರನ್ನೂ ವಶಕ್ಕೆ ಪಡೆಯಲಾಗಿದೆ. ಶೀಘ್ರವೇ ಅವರನ್ನು ಬಿಡುಗಡೆ ಮಾಡಲಾಗುವುದುʼ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ʻಸಾಂಕ್ರಾಮಿಕ ಕೋವಿಡ್ ಸಂದರ್ಭದಲ್ಲಿ ಮುಂಜಾಗ್ರತೆ ಕ್ರಮವಾಗಿ ಅವರನ್ನು ಬಂಧಿಸಲಾಗಿದೆ. ಚಿದಂಬರಂನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಪಾಲ್ಗೊಂಡು ಸೋಂಕು ಹರಡುವಿಕೆಗೆ ಕಾರಣವಾಗಬಾರದು ಎಂದು ಈ ಕ್ರಮಕೈಗೊಳ್ಳಲಾಗಿದೆ. ಎಲ್ಲರನ್ನೂ ಸಂಜೆ ಬಿಡುಗಡೆ ಮಾಡಲಾಗುವುದುʼ ಎಂದು ಸ್ಪಷ್ಟಪಡಿಸಿದ್ದಾರೆ.
ತಮ್ಮ ಬಂಧನ ಕುರಿತು ಟ್ವೀಟ್ ಮಾಡಿರುವ ಖುಷ್ಬೂ ಸುಂದರ್, ʻಪೊಲೀಸರು ನಮ್ಮನ್ನು ಬಂಧಿಸಿ ವಾಹನದಲ್ಲಿ ಕರೆದೊಯ್ದರು. ನಮ್ಮ ಕೊನೆ ಉಸಿರಿರುವವರೆಗೆ ಮಹಿಳೆ ಘನತೆಗಾಗಿ ಹೋರಾಡುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಯರ ಸುರಕ್ಷತೆ ಕುರಿತು ಮಾತನಾಡಿದ್ದಾರೆ. ಅವರ ಹಾದಿಯಲ್ಲಿಯೇ ನಾವು ಸಾಗಲಿದ್ದೇವೆ. ದೌರ್ಜನ್ಯಗಳಿಗೆ ನಾವೆಂದೂ ತಲೆಬಾಗುವುದಿಲ್ಲʼ ಎಂದು ಹೇಳಿದ್ದಾರೆ.