ನವದೆಹಲಿ: ಬಿಹಾರ ವಿಧಾನಸಭೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಕೊನೆಗೂ ಮಹೂರ್ತ ಫಿಕ್ಸ್ ಮಾಡಿದ್ದು, ಅಕ್ಬೋಬರ್ 28, ನವೆಂಬರ್3 ಹಾಗೂ 7ರಂದು ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ.
ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗದ ಅಧ್ಯಕ್ಷ ಸುನಿಲ್ ಅರೋರಾ ಅವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಬಿಹಾರ ವಿಧಾನಸಭೆ ಚುನಾವಣೆ ಒಟ್ಟು ಮೂರು ಹಂತಗಳಲ್ಲಿ ನಡೆಸಲು ನಿರ್ಧರಿಸಲಾಗಿದ್ದು, ಅಕ್ಟೋಬರ್ 28ರಂದು ಮೊದಲ ಹಂತದ ಚುನಾವಣೆ ನಡೆಯಲಿದ್ದು, 71 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಅಂತೆಯೇ ನವೆಂಬರ್ 3ರಂದು 2ನೇ ಹಂತದ ಚುನಾವಣೆ ನಡೆಯಲಿದ್ದು, 94 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಸಲಾಗುತ್ತದೆ. ಅಂತಿಮ ಮತ್ತು 3ನೇ ಹಂತದ ಚುನಾವಣೆ ನವೆಂಬರ್ 7ರಂದು ನಡೆಯಲಿದ್ದು, ಒಟ್ಟು 78 ವಿಧಾನಸಭಾ ಕ್ಷೇತ್ರಗಳಲ್ಲಿ ಅಂದು ಮತದಾನ ನಡೆಯಲಿದೆ.
ನವೆಂಬರ್ 10ರಂದು ಮತಎಣಿಕೆ ಪ್ರಕ್ರಿಯೆ ನಡೆಯಲಿದ್ದು, ಅಂದೇ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ ಎಂದು ಸುನಿಲ್ ಅರೋರಾ ಅವರು ಹೇಳಿದರು.
ಮತದಾನದ ಅವಧಿ 1 ಗಂಟೆ ಹೆಚ್ಚಳ
ಕೊರೋನಾ ಸಾಂಕ್ರಾಮಿಕ ಹಿನ್ನಲೆಯಲ್ಲಿ ಈ ಬಾರಿಯ ಮತದಾನದ ಅವಧಿಯನ್ನು ಒಂದು ಗಂಟೆ ಹೆಚ್ಚಳ ಮಾಡಲಾಗಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಮತದಾನ ನಡೆಯಲಿದೆ. ಈ ಹಿಂದೆ 5 ಗಂಟೆಯವರೆಗೂ ಮಾತ್ರ ಮತದಾನ ನಡೆಯುತ್ತಿತ್ತು. ಈ ನಿಯಮ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಅನ್ವಯವಾಗುವುದಿಲ್ಲ ಎಂದು ಹೇಳಿದ್ದಾರೆ.