ಬೆಂಗಳೂರು, ನ. 18: ಡಾರ್ಕ್ ವೆಬ್ ಮೂಲಕ ಅಕ್ರಮ ಹಣ ಸಂಪಾದನೆ ಮಾಡುತ್ತಿದ್ದ ಕುಖ್ಯಾತ ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಎಂಬಾತನನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸರ್ಕಾರಿ ವೆಬ್ ಸೈಟ್ಗಳ ಜೊತೆಗೆ ಅಂತಾರಾಷ್ಟ್ರೀಯ ವೆಬ್ಸೈಟ್ಗಳನ್ನೂ ಹ್ಯಾಕ್ ಮಾಡುತ್ತಿದ್ದ ಶ್ರೀಕಿ, ಆನ್ಲೈನ್ ಬಿಟ್ ಕಾಯಿನ್ ಮೂಲಕ ಬ್ಯುಸಿನೆಸ್ ಶುರು ಮಾಡಿದ್ದ. ಗೇಮಿಂಗ್ ವೆಬ್ಸೈಟ್ಗಳಲ್ಲಿ ನಿಪುಣನಾಗಿದ್ದ ಶ್ರೀಕಿಯನ್ನು ದೇವನಹಳ್ಳಿ ಹಾಗೂ ಗೋವಾದ ಪಂಚತಾರಾ ಹೋಟೆಲ್ಗಳಲ್ಲಿ ಇರಿಸಿ ಹ್ಯಾಕಿಂಗ್ ಕೆಲಸ ಮಾಡಿಸಲಾಗುತ್ತಿತ್ತು ಎನ್ನಲಾಗಿದೆ.
ವೆಬ್ ಸೈಟ್ಗಳ ಹ್ಯಾಕಿಂಗ್ ಜತೆಗೆ ಮಾದಕ ವ್ಯಸನಿಯೂ ಆಗಿದ್ದ ಶ್ರೀಕಿ ಮೂಲಕ ಡ್ರಗ್ಸ್ ದಂಧೆಯನ್ನು ಸಹ ನಡೆಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಈಗಾಗಲೇ ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿರುವ ಸುನೀಶ್ ಹೆಗ್ಡೆಗೆ ಡಾರ್ಕ್ ವೆಬ್ ಜಾಲವನ್ನು ಪರಿಚಯಿಸಿದ್ದು ಇದೇ ಶ್ರೀಕಿ ಎಂದು ತಿಳಿದು ಬಂದಿದೆ. ಹ್ಯಾಕರ್ ಶ್ರೀಕಿ ಬಂಧನದ ವಿಚಾರವನ್ನು ಬೆಂಗಳೂರಿನ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಟ್ವೀಟ್ ಮೂಲಕ ತಿಳಿಸಿದ್ದಾರೆ.