ದೆಹಲಿ: ಕೊರೊನಾ ಅಬ್ಬರದ ನಡುವೆಯೂ ಭಾರತದಲ್ಲಿ ಡಿಜಿಟಲ್ ಕ್ರಾಂತಿಗೆ ಮುಂದಾಗಿರುವ ಗೂಗಲ್ ಸಂಸ್ಥೆ ಭಾರತದಲ್ಲಿ ಮುಂದಿನ 5-7 ವರ್ಷಗಳಲ್ಲಿ ಬರೋಬ್ಬರಿ 10 ಬಿಲಿಯನ್ ಡಾಲರ್ ಅಂದರೆ ಸುಮಾರು 75 ಸಾವಿರ ಕೋಟಿ ಹಣವನ್ನು ಹೂಡಿಕೆ ಮಾಡಲಿರುವುದಾಗಿ ಸೋಮವಾರ ಘೋಷಿಸಿದೆ.
ಸೋಮವಾರ ಮುಂಜಾನೆ ಪ್ರಧಾನಿ ಮೋದಿ ಹಾಗು ಗೂಗಲ್ ಸಂಸ್ಥೆಯ ಮುಖ್ಯಸ್ಥ ಸುಂದರ್ ಪಿಚೈ ನಡುವಿನ ಸಂವಾದದ ಬಳಿಕ ಈ ಅಚ್ಚರಿ ಬೆಳವಣಿಗೆ ನಡೆದಿದ್ದು, ‘ಗೂಗಲ್ ಫಾರ್ ಇಂಡಿಯಾ ಡಿಜಿಟೈಸೇಶನ್ ಫಂಡ್‌ಅನ್ನು ಘೋಷಿಸಿಲು ತುಂಬಾ ಉತ್ಸುಕನಾಗಿದ್ದೇನೆ ಎಂದಿದ್ದಾರೆ. ಅಲ್ಲದೇ ನಾವು ಭಾರತದಲ್ಲಿ 75 ಸಾವಿರ ಕೋಟಿ ರೂಪಾಯಿ ಹಣವನ್ನು ಶೇರು ಹೂಡಿಕೆ, ಸಹಭಾಗಿತ್ವ, ಕಾರ್ಯಾಚರಣೆ, ಮೂಲಭೂತ ಮತ್ತು ಪರಿಸರ ಸ್ನೇಹಿ ಯೋಜನೆ ಮೂಲಕ ಹೂಡಿಕೆ ಮಾಡುವುದಾಗಿ ವಿವರಿಸಿದ್ದಾರೆ.
ಭಾರತದ ಮುಂದಿನ ಭವಿಷ್ಯಕ್ಕೆ ಈ ಹೂಡಿಕೆಯನ್ನು ಮಾಡಲು ಸಂಸ್ಥೆ ನಿರ್ಧರಿಸಿರುವುದಾಗಿ ಹೇಳಿರುವ ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ, ಸಮರ್ಪಕ ಮಾಹಿತಿಯನ್ನೊಳಗೊಂಡ ಡಿಜಿಟಲೈಸೇಶನ್ ಅನ್ನು ಹಿಂದಿ, ತಮಿಳು, ಪಂಜಾಬಿ ಸೇರಿದಂತೆ ಭಾರತದ ಎಲ್ಲಾ ಭಾಷೆಗಳಲ್ಲಿಯೂ ಲಭ್ಯವಾಗುವಂತೆ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದು ಪಿಚೈ ತಿಳಿಸಿದ್ದಾರೆ.