ನವದೆಹಲಿ: ಕ್ರೀಡಾ ಬೆಟ್ಟಿಂಗ್ ಚಟುವಟಿಕೆ ಕುರಿತ ನೀತಿಯನ್ನು ಉಲ್ಲಂಘಿಸಿದ್ದಕ್ಕಾಗಿ ಪೇಟಿಯಂ ಅಪ್ಲಿಕೇಶನನ್ನು ಸೆ. 18ರಂದು ಗೂಗಲ್ ಪ್ಲೇಸ್ಟೋರ್ ಕೆಲವು ಗಂಟೆಗಳ ಕಾಲ ನಿರ್ಬಂಧಿಸಿತ್ತು. ಇದಕ್ಕೆ ಪ್ರತಿಯಾಗಿ ಈಗ ಪೇಟಿಎಂ ಪ್ರತ್ಯೇಕ ತನ್ನದೇ ಆದ ಆಂಡ್ರಾಯಿಡ್ ಮಿನಿ ಆಪ್ ಸ್ಟೋರ್ ನ್ನು ಪ್ರಾರಂಭಿಸಿದೆ. ಇದು ಪೇಟಿಎಂ ಹಾಗೂ ದೈತ್ಯ ಗೂಗಲ್ ನಡುವೆ ಭಾರೀ ತಿಕ್ಕಾಟಕ್ಕೆ ಕಾರಣವಾಗಿದೆ.
ಪೇಟಿಎಂ ಮಿನಿ ಅಪ್ಲಿಕೇಶನ್ ಗಳ ಲಿಸ್ಟ್ ಮತ್ತು ಡಿಸ್ಟ್ರಿಬ್ಯೂಷನ್ ಅನ್ನು ಯಾವುದೇ ಶುಲ್ಕವಿಲ್ಲದೆ ತನ್ನ ಅಪ್ಲಿಕೇಶನ್ನಲ್ಲಿ ಒದಗಿಸುತ್ತಿದೆ. ಅಲ್ಲದೆ ಹಣ ಪಾವತಿಗಾಗಿ ಡೆವಲಪರ್ ಗಳು ಮತ್ತು ಬಳಕೆದಾರರಿಗೆ paytm wallet, paytm payments Bank, UPI, net banking cards ಆಯ್ಕೆಗಳನ್ನು ನೀಡಲು ಸಾಧ್ಯವಿದೆ ಎಂದು ಪೇಟಿಎಂ ಹೇಳಿದೆ.
ಸುಮಾರು 300 ಕ್ಕೂ ಹೆಚ್ಚು ಅಪ್ಲಿಕೇಶನ್ ಆಧಾರಿತ ಸೇವಾ ಪೂರೈಕೆದಾರರಾದ ಡೆಕಾಥ್ಲಾನ್, ಓಲಾ, ಪಾರ್ಕ್, ರಾಪಿಡೊ,1ಎಂಜಿ ,ಡೊಮಿನೋಸ್, ಪಿಜ್ಜಾ, ಫ್ರೆಶ್ಮೆನು, ನೋಬ್ರೋಕರ್ ಮುಂತಾದ ದೊಡ್ಡ ದೊಡ್ಡ ಕಂಪೆನಿಗಳು ಈಗಾಗಲೇ ಈ ಪ್ರೋಗ್ರಾಮ್ ಗೆ ಸೇರ್ಪಡೆಗೊಂಡಿವೆ.
ತಮ್ಮ ಅಪ್ಲಿಕೇಶನ್ ಬಗ್ಗೆ ಇನ್ನಷ್ಟು ಮಾಹಿತಿ ನೀಡಿದ ಪೇಟಿಎಂ ಸಂಸ್ಥಾಪಕ ಮತ್ತು ಸಿಇಒ ವಿಜಯ್ ಶೇಖರ್ ಶರ್ಮಾ, ಇಂದು ನಾವು ಪ್ರತಿಯೊಬ್ಬ ಭಾರತೀಯನಿಗೆ, ಅಪ್ಲಿಕೇಶನ್ ಡೆವಲಪರ್ ಗಳಿಗೆ ಅವಕಾಶವನ್ನು ಕಲ್ಪಿಸುವ ಹೊಸ ವೇದಿಕೆಯನ್ನು ಪ್ರಾರಂಭಿಸಿದ್ದೇವೆ. ಈ ಬಗ್ಗೆ ನಮಗೆ ಹೆಮ್ಮೆ ಇದೆ. ನವನವೀನ ಸೇವೆಗಳನ್ನು ನಿರ್ಮಿಸಲು ನಮ್ಮ ವ್ಯಾಪ್ತಿ ಮತ್ತು ಪಾವತಿಗಳನ್ನು ಸದುಪಯೋಗಪಡಿಸಲು ಪೇಟಿಎಂ ಮಿನಿ ಆಪ್ ಸ್ಟೋರ್ ಭಾರತೀಯ ಯುವ ಡೆವಲಪರ್ ಗಳಿಗೆ ಅಧಿಕಾರ ನೀಡುತ್ತದೆ ಎಂದರು.