ಬುಡಕಟ್ಟು ಜನಾಂಗದ ವ್ಯಕ್ತಿಯೊಬ್ಬ ತನ್ನ ಮಗನ 10 ನೇ ತರಗತಿ ಪೂರಕ ಪರೀಕ್ಷೆಗಾಗಿ ಬರೋಬ್ಬರಿ 105 ಕಿ.ಮಿ ಸೈಕಲ್ ತುಳಿದುಕೊಂಡು ಮಗನನ್ನು ಪರೀಕ್ಷಾ ಕೇಂದ್ರಕ್ಕೆ ತಲುಪಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದ ಧಾರ್ ಜಿಲ್ಲೆಯ ಶೋಭಾರಾಮ್ ಮಂಗಳವಾರದಂದು ನಡೆಯಬೇಕಾಗಿದ್ದ ತನ್ನ ಮಗ ಆಶೀಶ್ ನ ಗಣಿತ ಪರೀಕ್ಷೆಗಾಗಿ ಸೋಮವಾರವೇ ತಮ್ಮ ಊರಿಂದ ಹೊರಟು ರಾತ್ರೀಯೇ ಪರೀಕ್ಷಾ ಕೇಂದ್ರದ ಬಳಿ ತಲುಪಿದ್ದಾರೆ. ಇನ್ನು ಪರೀಕ್ಷೆಗೆ ಕೆಲ ನಿಮಿಷಗಳ ಕಾಲ ಇದ್ದಾಗ ಕೇಂದ್ರವನ್ನು ತಲುಪಿದ್ದಾರೆ.
ಈ ಬಗ್ಗೆ ಮಾತನಾಡಿದ ಶೋಭಾರಾಮ್ ನಾನು ದಿನಗೂಲಿ ಮಾಡಿ ಬದುಕುತ್ತಿದ್ದರೂ ನನ್ನ ಮಗ ಚೆನ್ನಾಗಿ ಓದಿ ದೊಡ್ಡ ವ್ಯಕ್ತಿಯಾಗಬೇಕು ಎಂಬ ಕನಸನ್ನು ಇಟ್ಟುಕೊಂಡಿದ್ದೇನೆ. ಲಾಕ್ಡೌನ್ ಕಾರಣದಿಂದ ನಮ್ಮ ಊರಿಂದ ಯಾವುದೇ ಸಾರಿಗೆ ವ್ಯವಸ್ಥೆ ಇರಲಿಲ್ಲ. ನನ್ನ ಬಳಿ ಮೋಟರ್ ಸೈಕಲ್ ಇಲ್ಲದ ಕಾರಣ ಇಷ್ಟು ದೂರ ಸೈಕಲ್ ತುಳಿದೇ ಬರಬೇಕಾಯಿತು. ಮಗನ ಪರೀಕ್ಷೆಗೆಂದು ನಾನು ದಿನಗೂಲಿ ಮಾಡಿ ಸಂಪಾದಿಸಿದ ಹಣವನ್ನು ಸಂಗ್ರಹಿಸಿದ್ದೆ. ನಾನೊಬ್ಬ ರೈತನಾದರೂ ಸಹ ದಿನಗೂಲಿ ಮಾಡೀಯೇ ಮನೆ ನಡೆಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಇನ್ನು ಧಾರ್ ನಲ್ಲಿ ಊಟಕ್ಕೆ ತೊಂದರೆಯಿದೆ ಎಂದು ಮನೆಯಿಂದಲೇ 3 ದಿನಕ್ಕೆ ಊಟ ಕೂಡ ತಂದುಕೊಂಡಿದ್ದೇವೆ ಎಂದು ಶೋಭಾರಾಮ್ ಹೇಳಿದ್ದಾರೆ. ‘ತಂದೆ ನನ್ನ ಪರೀಕ್ಷೆಗೆ ಸಾಕಷ್ಟು ಪ್ರೋತ್ಸಾಹಿಸಿದ್ದಾರೆ. ಬಸ್ ವ್ಯವಸ್ಥೆ ಇಲ್ಲದ ಕಾರಣ ಸೈಕಲ್ ನಲ್ಲಿ ಬಂದಿದ್ದೇವೆ. ನನ್ನ ತಂದೆಗೆ ಸಹಾಯವಾಗಬೇಕೆಂದು ನಾನು ಕೂಡ ಕೆಲ ಸಮಯ ಸೈಕಲ್ ತುಳಿದುಕೊಂಡು ಪರೀಕ್ಷಾ ಕೇಂದ್ರವನ್ನು ತಲುಪಿದ್ದೇವೆ. ನಾನು ಮುಂದೆ ಚೆನ್ನಾಗಿ ಓದಿ ದೊಡ್ಡ ಅಧಿಕಾರಿ ಆಗಬೇಕೆಂದು ಬಯಸುತ್ತೇನೆ’ ಎಂದು ಆಶೀಶ್ ತಿಳಿಸಿದ್ದಾರೆ..
ಈ ಕುರಿತು ಪ್ರತಿಕ್ರಿಯೆ ನೀಡಿದ ಧಾರ್ ನ ಬುಡಕಟ್ಟು ಜನಾಂಗದ ಸಹಾಯಕ ಆಯುಕ್ತರು, ಈ ತಂದೆ ಮಗನ ಬಗ್ಗೆ ತಿಳಿದು ಬಹಳ ಸ್ಪೂರ್ತಿ ಎನಿಸಿತು. ಇನ್ನು ಆಗಸ್ಟ್ 24 ರವರೆಗೂ ಪರೀಕ್ಷೆ ನಡೆಯುವುದರಿಂದ ತಂದೆ-ಮಗ ಅಲ್ಲೇ ಉಳಿದು ಕೊಳ್ಳುವುದಕ್ಕೆ ಹಾಗೂ ಊಟದ ವ್ಯವಸ್ಥೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.