ಇಂದು ಯೋಗ ದಿನ, ಯೋಗ ಎಲ್ಲರನ್ನೂ ಒಂದುಗೂಡಿಸುವ ಕಾರಣ ಯೋಗ ದಿನವನ್ನು ಏಕತೆಯ ದಿನ ಮತ್ತು ಸಾರ್ವತ್ರಿಕ ಸಹೋದರತ್ವದ ದಿನ ಎಂದು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವನ್ನು ಉದ್ದೇಶಿಸಿ 6ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಂದು ಹೇಳಿದ್ದಾರೆ.
ಈ ವರ್ಷ ಮನೆಯಲ್ಲಿ ಯೋಗ, ಕುಟುಂಬದೊಂದಿಗೆ ಯೋಗ ಸಂದೇಶ ಮುಖ್ಯವಾಗಿದೆ. ಏಕೆಂದರೆ ಈ ವರ್ಷ ಕೋವಿಡ್-19 ಸಾಂಕ್ರಾಮಿಕ ರೋಗ ದೇಶವನ್ನು ಕಾಡುತ್ತಿದೆ ಇದರಿಂದಾಗಿ ಎಲ್ಲರು ಮನೆಯಲ್ಲಿ ಯೋಗ ದಿನವನ್ನು ಆಚರಿಸಿ, ಜತೆಗೆ ಮನೆಯ ಸದಸ್ಯರೊಂದಿಗೆ ಯೋಗ ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗಿದೆ. ಯೋಗ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಜತೆಗೆ ಕೋವಿಡ್ ವೈರೆಸ್ ಉಸಿರಾಟದ ವ್ಯವಸ್ಥೆಯ ಮೇಲೆ ಹೆಚ್ಚು ಪರಿಣಾಮ ಬೀರುವುದರಿಂದ ಪ್ರಾಣಾಯಾಮ ಮಾಡುವುದು ಉತ್ತಮ ವ್ಯಾಯಾಮವಾಗಿದೆ.
ಧರ್ಮ,ಜಾತಿ,ಲಿಂಗ,ಬಣ್ಣ,ವರ್ಗ ಮೀರಿ ಮಾನವೀಯ ಸಂಬಂಧ, ಏಕತೆ ಸಾರುವ ಶಕ್ತಿ ಯೋಗಕ್ಕಿದೆ. ಯೋಗ ಮಾಡಲು ನಮಗೆ ಬೇಕಾಗಿರುವುದು ಸ್ವಲ್ಪ ಸಮಯ ಮತ್ತು ಸ್ಥಳ. ದೃಢ ಆರೋಗ್ಯ, ಉತ್ತಮ ಸಮಾಜ ನಿರ್ಮಾಣಕ್ಕೆ ಯೋಗ ಮಾಡುವುದು ಅತ್ಯಂತ ಉಪಕಾರಿ. ಯೋಗ ಏಕತೆ, ಒಗ್ಗಟ್ಟನ್ನು ಹೆಚ್ಚಿಸಿ ಮಾನವೀಯ ಸಂಬಂಧಗಳನ್ನು ಗಟ್ಟಿಮಾಡುತ್ತದೆ.
ಜೂನ್ 21,2015 ರಂದು ಮೊದಲ ಬಾರಿಗೆ ಯೋಗ ದಿನವನ್ನು ಆಚರಣೆ ಮಾಡಲಾಯಿತು. ಪ್ರತಿವರ್ಷ ಕೂಡ ಒಂದೊಂದು ಥೀಮ್‍ನೋಂದಿಗೆ ಯೋಗ ದಿನವನ್ನು ಆಚರಿಸಲಾಗುತ್ತಿತ್ತು. ದೇಶವನ್ನು ಕರೋನಾ ವೈರೆಸ್ ಕಾಡುತ್ತಿರುವುದರಿಂದ ಈ ವರ್ಷ ಮನೆಯಲ್ಲಿ ಯೋಗ, ಕುಟುಂಬದೊಂದಿಗೆ ಯೋಗ ಎಂಬ ಸಂದೇಶದೊಂದಿಗೆ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಪ್ರತಿದಿನ ಯೋಗ ಅಭ್ಯಾಸ ಮಾಡುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡು ಉತ್ತಮ ಆರೋಗ್ಯವನ್ನು ಪಡೆಯಬಹುದು. ಜತೆಗೆ ಕರೋನಾ ವೈರೆಸ್ ಸಾಂಕ್ರಾಮಿಕ ರೋಗವನ್ನು ಪ್ರತಿದಿನ ಪ್ರಾಣಾಯಾಮ ಮಾಡುವುದರಿಂದ ರೋಗದಿಂದ ಗುಣಮುಖವಾಗಬಹುದಾಗಿದೆ.