ಭಾರತದ ಮಾಜಿ ರಾಷ್ಟ್ರಪತಿ, ಭಾರತ ರತ್ನ ಪ್ರಣವ್ ಮುಖರ್ಜಿ ಅವರು ಸೋಮವಾರದಂದು ಇಹಲೋಕ ತ್ಯಜಿಸಿದ್ದಾರೆ.
ಪ್ರಣಬ್ ಮುಖರ್ಜಿ ಅವರ ನಿಧನದ ಸುದ್ದಿಯನ್ನು ಸ್ವತಃ ಅವರ ಪುತ್ರ ಅಭಿಜಿತ್ ಮುಖರ್ಜಿ ಸೋಮವಾರ ಟ್ವೀಟ್ ಮಾಡಿ ತಿಳಿಸಿದ್ದಾರೆ. ‘ಆರ್‌ಆರ್ ಆಸ್ಪತ್ರೆಯ ವೈದ್ಯರ ಸತತ ಪ್ರಯತ್ನದಿಂದಲೂ ಹಾಗು ಭಾರತೀಯರ ಪ್ರಾರ್ಥನೆಗಳ ಹೊರತಾಗಿಯೂ ನನ್ನ ತಂದೆ ಪ್ರಣಬ್ ಮುಖರ್ಜಿ ಅವರು ನಿಧನರಾಗಿದ್ದಾರೆ ಎಂದು ಭಾರವಾದ ಹೃದಯದೊಂದಿಗೆ ನಿಮಗೆ ತಿಳಿಸುತ್ತಿದ್ದೇನೆ. ನಿಮ್ಮೆಲ್ಲರಿಗೂ ಧನ್ಯವಾದಗಳು,’ ಎಂದು ಅಭಿಜಿತ್ ಮುಖರ್ಜಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಕೊರೊನಾ ವೈರಸ್ ಸೋಂಕಿತರಾಗಿದ್ದ ಪ್ರಣಬ್ ಅವರನ್ನು ದಿಲ್ಲಿ ಕಂಟೋನ್ಮೆಂಟ್ ಪ್ರದೇಶದಲ್ಲಿ ಇರುವ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಇದಕ್ಕೂ ಮುನ್ನ ಮಿದುಳಿನಲ್ಲಿ ಹೆಪ್ಪುಗಟ್ಟಿದ್ದ ರಕ್ತವನ್ನು ಹೊರತೆಗೆಯುವ ಸಲುವಾಗಿ ಶಸ್ತ್ರಚಿಕಿತ್ಸೆಗೆಂದು ದೆಹಲಿಯ ಸೇನಾ ಆಸ್ಪತ್ರೆಗೆ ದಾಖಲಾಗಿದ್ದರು. ಶಸ್ತ್ರಚಿಕಿತ್ಸೆ ನಂತರ ಕೋಮಾಕ್ಕೆ ಜಾರಿದ್ದ ಪ್ರಣವ್ ಮುಖರ್ಜಿ ಅವರ ಶ್ವಾಸಕೋಶಕ್ಕೆ ಸೋಂಕು ತಗುಲಿರುವ ಕುರಿತು ಮಾಧ್ಯಮಗಳು ವರದಿ ಮಾಡಿದ್ದವು. ಕಳೆದ ಕೆಲ ದಿನಗಳಿಂದ ಅವರ ದೇಹ ಸ್ಥಿತಿ ತೀರಾ ಗಂಭೀರವಾಗಿತ್ತು.
84 ವರ್ಷ ವಯಸ್ಸಿನ ಪ್ರಣಬ್ ಮುಖರ್ಜಿ, ಭಾರತದ 13ನೇ ರಾಷ್ಟ್ರಪತಿಗಳಾಗಿ ಕಾರ್ಯನಿರ್ವಹಿಸಿದ್ದರು. 25 ಜುಲೈ 2012ರಿಂದ 25 ಜುಲೈ 2017ರವರೆಗೆ ಪ್ರಣಬ್ ಭಾರತದ ರಾಷ್ಟ್ರಪತಿಗಳಾಗಿದ್ದರು. ಪ್ರಣಬ್ ಮುಖರ್ಜಿ ಅವರಿಗೆ 2019ರಲ್ಲಿ ಭಾರತ ರತ್ನ ಹಾಗೂ 2008ರಲ್ಲಿ ಪದ್ಮ ವಿಭೂಷಣ ಪುರಸ್ಕಾರ ನೀಡಿ ಗೌರವಿಸಲಾಗಿತ್ತು.