ಬೆಂಗಳೂರು, ನ.2: ಕೋವಿಡ್ ಸೋಂಕು ನಿರ್ಮೂಲನೆಯ ಮುಂಜಾಗ್ರತೆಗಾಗಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಮಾಸ್ಕ್ ಧರಿಸಿಲ್ಲ, ಸಾಮಾಜಿಕ ಅಂತರ ಕಾಪಾಡಿಲ್ಲ ಎಂದರೆ ದಂಡ ಕಟ್ಟುವುದು ಅನಿವಾರ್ಯವಾಗಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್ಗಳಲ್ಲಿ ಸಿಬ್ಬಂದಿ, ಪ್ರಯಾಣಿಕರು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಬಸ್ನಲ್ಲಿ ಮಾಸ್ಕ್ ಹಾಕದ ಪ್ರಯಾಣಿಕರಿಗೆ 100 ರೂ. ದಂಡವನ್ನು ಹಾಕಲಾಗುತ್ತಿದೆ.
ಮಾಸ್ಕ್ ಧರಿಸದ ಪ್ರಯಾಣಿಕರಿಂದ 100 ರೂ. ದಂಡ ವಸೂಲಿ ಮಾಡುವ ಅಧಿಕಾರನ್ನು ಟಿಕೆಟ್ ತನಿಖಾಧಿಕಾರಿಗೆ ನೀಡಲಾಗಿದೆ. ಸಿಬ್ಬಂದಿ ಸಹ ಮಾಸ್ಕ್ ಹಾಕದಿದ್ದರೆ ತನಿಖಾಧಿಕಾರಿಗಳು ದಂಡ ಹಾಕಬಹುದು.
ಕಡ್ಡಾಯವಾಗಿ ಮಾಸ್ಕ್ ಧರಿಸಿ. ಇಲ್ಲವಾದಲ್ಲಿ 100 ರೂ. ದಂಡ ಕಟ್ಟಲು ಸಿದ್ಧವಾಗಿರಿ. ಸಾರ್ವಜನಿ ಸ್ಥಳದಲ್ಲಿ ಮಾಸ್ಕ್ ಹಾಕದಿದ್ದರೆ 250 ರೂ. ದಂಡವನ್ನು ಕಟ್ಟಬೇಕು ಎಂಬ ಮಾಹಿತಿ ಸರ್ಕಾರ ನೀಡಿದೆ. ಒಟ್ಟಿನಲ್ಲಿ ಮಾಸ್ಕ್ ಇಲ್ಲದೆ ಹೊರಬರುವಂತಿಲ್ಲ.ಬೆಂಗಳೂರು ನಗರದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಭಾನುವಾರ ನಗರದಲ್ಲಿ 2,167 ಹೊಸ ಪ್ರಕರಣ ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 3,38,636ಕ್ಕೆ ಏರಿಕೆಯಾಗಿದೆ. ಕೋವಿಡ್ ಸಂಖ್ಯೆ ಕಡಿಮೆಯಾದರೂ ಅದನ್ನು ಇನ್ನೂ ಹತೋಟಿಯಲ್ಲಿಡಲು ಮುಂಜಾಗ್ರತೆ ಅವಶ್ಯಕವಾಗಿದೆ.