ಹೊಸದಿಲ್ಲಿ: ಉತ್ತರ ಕನ್ನಡದ ಸಂಸದ ಅನಂತ ಕುಮಾರ್ ಹೆಗಡೆ, ಹೊಸದಿಲ್ಲಿ ಸಂಸದೆ ಮೀನಾಕ್ಷಿ ಲೇಖಿ, ಸತ್ಯಪಾಲ್ ಸಿಂಗ್ ಸೇರಿದಂತೆ 17 ಮಂದಿ ಸಂಸದರು ಹಾಗೂ 9 ಮಂದಿ ರಾಜ್ಯಸಭಾ ಸದಸ್ಯರು ಸೇರಿದಂತೆ ಒಟ್ಟು 25 ಮಂದಿ ಸಂಸತ್ ಸದಸ್ಯರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ಮುಂಗಾರು ಅಧಿವೇಶನ ಸೋಮವಾರದಿಂದ ಆರಂಭವಾದ ಹಿನ್ನೆಲೆಯಲ್ಲಿ ಅಧಿವೇಶನದಲ್ಲಿ ಪಾಲ್ಗೊಂಡ ಎಲ್ಲರಿಗೂ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅನಂತ ಕುಮಾರ್ ಹೆಗಡೆ ಸೇರಿದಂತೆ 17 ಮಂದಿ ಎಂಪಿ ಗಳು ಹಾಗೂ 9 ಮಂದಿ ರಾಜ್ಯಸಭಾ ಸದಸ್ಯರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ಅಧಿವೇಶನದಲ್ಲಿ ಪಾಲ್ಗೊಳ್ಳುವ ಸಲುವಾಗಿ ಸಂಸದ ಅನಂತ ಕುಮಾರ್ ಹೆಗಡೆ ಶುಕ್ರವಾರ ಹುಬ್ಬಳ್ಳಿಯಿಂದ ದೆಹಲಿಗೆ ವಿಮಾನದ ಮೂಲಕ ತೆರಳಿದ್ದರು. ಬಳಿಕ ದೆಹಲಿಯಲ್ಲಿ ಎನ್ಐಸಿಪಿಆರ್ ಆಸ್ಪತ್ರೆಯಲ್ಲಿ ಕೋವಿಡ್ ತಪಾಸಣೆಗೆ ಒಳಪಟ್ಟಿದ್ದರು. ಈ ವೇಳೆ ಅನಂತ ಕುಮಾರ್ ಹೆಗಡೆ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ಕೊರೊನಾ ಸೋಂಕಿಗೆ ತುತ್ತಾಗಿರುವ ಲೋಕಸಭಾ ಸದಸ್ಯರಲ್ಲಿ ಬಿಜೆಪಿಯ 11, ವೈಎಸ್ಆರ್ ಕಾಂಗ್ರೆಸ್ನ ಇಬ್ಬರು, ಶಿವಸೇನೆ, ಡಿಎಂಕೆ ಹಾಗೂ ಆರ್ಎಲ್ಪಿಯ ತಲಾ ಒಬ್ಬರು ಎಂಪಿಗಳಿಗೆ ಸೋಂಕು ದೃಢಪಟ್ಟಿದೆ.