ಬೆಂಗಳೂರು : ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ದಿವಂಗತ ಮಾಜಿ ಡಾನ್ ಮುತ್ತಪ್ಪ ರೈ ನಿವಾಸದ ಮೇಲೆ ಧಾಳಿ ನಡೆಸಿದ್ದಾರೆ. ಬೆಂಗಳೂರಿನ ಹೊರವಲಯದ ಬಿಡದಿ ನಿವಾಸ ಹಾಗೂ ಸದಾಶಿವನಗರದಲ್ಲಿರುವ ರೈ ನಿವಾಸದ ಮೇಲೆ ಧಾಳಿ ನಡೆಸಲಾಗಿದೆ.
ಎಸಿಪಿ ವೇಣುಗೋಪಾಲ್ ನೇತೃತ್ವದಲ್ಲಿ ಸಿಸಿಬಿ ಅಧಿಕಾರಿಗಳ ತಂಡ ರೈ ನಿವಾಸದ ಮೇಲೆ ಧಾಳಿ ನಡೆಸಿದ್ದಾರೆ. ದಿ. ಮುತ್ತಪ್ಪ ರೈ ಮಗ ರಿಕ್ಕಿ ರೈಗೆ ಡ್ರಗ್ ಪೆಡ್ಲರ್ ಗಳ ಜೊತೆ ನಿರಂತರ ಸಂಪರ್ಕ ಹೊಂದಿರುವ ಆರೋಪ ಕೇಳಿಬಂದಿದ್ದು, ಈಗಾಗಲೇ ಬಂಧಿತ ರಾಗಿರುವ ಆರೋಪಿಗಳ ಜತೆ ರಿಕ್ಕಿ ರೈ ಸತತ ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ದೊರಕಿದೆ. ಹಾಗೂ ಆರೋಪಿ ಆದಿತ್ಯಾ ಆಳ್ವಾ ಜೊತೆ ರಿಕ್ಕಿ ರೈ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸ್ ಅಧಿಕಾರಿಗಳು ರೈ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ.
ಬೆಂಗಳೂರು ಸಿ.ಸಿ.ಬಿ ಅಧಿಕಾರಿಗಳಾದ ಎಸಿಪಿ ವೇಣುಗೋಪಾಲ್ ರವರ ನೇತೃತ್ವದಲ್ಲಿ ಮೂವರು ಇನ್ಸ್ಪೆಕ್ಟರ್ ಗಳು ಹಾಗೂ ಸಿಬ್ಬಂದಿ ಸೇರಿ ಸುಮಾರು 20 ಜನರ ತಂಡ ಬಿಡದಿಯಲ್ಲಿನ ಮುತ್ತಪ್ಪ ರೈ ಫಾರ್ಮ್ ಹೌಸ್ ಗೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ .
ಫಾರ್ಮ್ ಹೌಸ್ ನಲ್ಲಿ ಸುಮಾರು 10 ಜನ ಆಳುಗಳು ಇದ್ದು ಮುತ್ತಪ್ಪ ರೈ 2 ನೇ ಪತ್ನಿ ಅನುರಾಧ ರೈ ಹಾಗೂ 2 ನೇ ಮಗ ರಿಕ್ಕಿ ರೈ ಬೆಂಗಳೂರಿನ ಸದಾಶಿವ ನಗರ ದಲ್ಲಿರುವ ಪ್ರತ್ಯೇಕ 2 ಮನೆಗಳಲ್ಲಿ ವಾಸವಾಗಿದ್ದಾರೆ. ಇನ್ನು ಸಿಸಿಬಿ ಪೊಲೀಸರು ರಿಕ್ಕಿ ರೈ ಮನೆ ಬಳಿಯಲ್ಲಿರುವ ಕಾರ್ ಶೆಡ್ ನಲ್ಲಿನ ಕಾರ್ ಪರಿಶೀಲನೆಯನ್ನು ನಡೆಸಿದ್ದಾರೆ.