ಬೆಂಗಳೂರು, ಡಿ. 13: ರಾಜ್ಯ ಸರ್ಕಾರಿ ಸಾರಿಗೆ ನೌಕರರು ಕೂಡಲೇ ಮುಷ್ಕರವನ್ನು ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕು. ಪಟ್ಟಭದ್ರ ಹಿತಾಸಕ್ತಿಗಳಿಗೆ ಬಲಿಯಾಗಬಾರದು. ನಿಮ್ಮ ಪರವಾಗಿ ಮುಖ್ಯಮಂತ್ರಿಗಳು ಹಾಗೂ ಸರ್ಕಾರವಿದೆ. ಕೂಡಲೇ ಮಾತುಕತೆಗೆ ಬನ್ನಿ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಕರೆ ನೀಡಿದರು.
ಈಗಾಗಲೇ ಸಾರಿಗೆ ನೌಕರರ 9 ಬೇಡಿಕೆಗಳನ್ನು ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಈಡೇರಿಸಿದ್ದಾರೆ. ಇನ್ನು ಲಾಕ್ ಡೌನ್ ಸಂಕಷ್ಟದ ಕಾಲದಲ್ಲಿಯೂ ಸಹ ಮುಖ್ಯಮಂತ್ರಿಗಳು ನೆರವಿಗೆ ಬಂದಿದ್ದಾರೆ. ಇಂತಹ ಸಂದರ್ಭದಲ್ಲಿ ಮುಷ್ಕರವನ್ನು ನಡೆಸುತ್ತಿರುವುದು ಸರಿಯಲ್ಲ ಎಂದು ಸಚಿವರು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕೋವಿಡ್ ಬಂದ ಮೇಲೆ ಸಾರಿಗೆ ಇಲಾಖೆ ಸೇರಿದಂತೆ ಸರ್ಕಾರಿ ನೌಕರರಿಗೆ ಸಂಬಳ ಕೊಡಲೂ ಕಷ್ಟ ಇರುವ ಸಂದರ್ಭದಲ್ಲಿ ಸರ್ಕಾರ ಯಾವುದೇ ರೀತಿಯ ತೊಂದರೆಯಾಗದಂತೆ ವೇತನ ಕೊಡುತ್ತಿದೆ. ಬಸ್ ನಲ್ಲಿ ಅರ್ಧದಷ್ಟು ಮಾತ್ರ ಪ್ರಯಾಣಿಕರು ಬರುತ್ತಿರುವ ಹಿನ್ನೆಲೆಯಲ್ಲಿ ಈಗಲೂ ಅರ್ಧದಷ್ಟು ಮಾತ್ರ ಆದಾಯ ಬರುತ್ತಿದೆ. ಉದಾಹರಣೆಗೆ ಬೆಂಗಳೂರಿನಿಂದ ಬೆಳಗಾವಿಗೆ ಬಸ್ ಚಲಾಯಿಸಿದರೆ ಬರುವ ಆದಾಯದಲ್ಲಿ ಗಾಡಿ ತೊಳೆಯಲೂ ಸಾಲುತ್ತಿಲ್ಲ. ಹೀಗಿದ್ದ ಮೇಲೆ ಸಾರಿಗೆ ನೌಕರರೂ ಸಹ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ಕೂಡಲೇ ಮುಷ್ಕರ ಕೈಬಿಟ್ಟು ಸರ್ಕಾರದ ಜೊತೆ ಮಾತುಕತೆಗೆ ಬರಬೇಕು ಎಂದು ಸಚಿವರು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ರೈತ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್ ಅವರು ಈ ವಿಷಯದಲ್ಲಿ ಮೂಗುತೂರಿಸುತ್ತಿರುವುದು ಸರಿಯಲ್ಲ. ಅವರು ಯಾರು ಇದಕ್ಕೆ ಅಡ್ಡಿಬರುತ್ತಿರುವುದಕ್ಕೆ? ಇದು ಎಷ್ಟು ಸರಿ? ಸರ್ಕಾರಿ ಸಾರಿಗೆ ನೌಕರರಿಗೂ ಇವರಿಗೂ ಏನು ಸಂಬಂಧ? ಇವರು ಮಧ್ಯಪ್ರವೇಶ ಮಾಡುವುದರೊಳಗೆ ಎಲ್ಲವೂ ಸರಿಯಾಗಿತ್ತು. ಅವರೇನು ಎಲ್ಲ ಕಡೆ ಕಾಂಟ್ರ್ಯಾಕ್ಟ್ ತೆಗೆದುಕೊಂಡಿದ್ದಾರೆಯೇ? ಇಂತಹ ಸಂದರ್ಭದಲ್ಲಿ ನೌಕರರು ಕುಳಿತು ಸಮಾಧಾನಕರವಾಗಿ ಬಗೆಹರಿಸಿಕೊಳ್ಳಬೇಕು. ಅದು ಬಿಟ್ಟು ಸರ್ಕಾರಕ್ಕೆ ಬೆದರಿಕೆ ಹಾಕಿದರೆ ಸರಿಯೇ ಎಂದು ಪ್ರಶ್ನಿಸಿದ ಸಚಿವರು, ಮುಖ್ಯಮಂತ್ರಿಗಳು ಹಾಗೂ ಸರ್ಕಾರ ಈ ವಿಷಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ, ಮೊದಲು ನೌಕರರು ಕರ್ತವ್ಯಕ್ಕೆ ಹಾಜರಾಗಲಿ ಎಂದು ಸಚಿವರು ಮನವಿ ಮಾಡಿದರು.