ಮೈಸೂರು: ಮೈಸೂರಿನ ಪ್ರಮುಖ ಪ್ರವಾಸಿ ತಾಣವಾಗಿರುವ ಮೃಗಾಲಯದ 20 ವರ್ಷ ವಯಸ್ಸಿನ ಬ್ರಹ್ಮ ಎಂಬ ಹೆಸರಿನ ಗಂಡು ಹುಲಿ ಶುಕ್ರವಾರ ಮರಣ ಹೊಂದಿದೆ.
ಬ್ರಹ್ಮ ಹುಲಿಯನ್ನು 2008ರ ಮಾರ್ಚ್ 18 ರಂದು ಕರ್ನಾಟಕ ಅರಣ್ಯ ಇಲಾಖೆಯಿಂದ ಮಾನವ-ಪ್ರಾಣಿ ಸಂಘರ್ಷ ಕಾರ್ಯಾಚರಣೆಯಡಿ ಮಡಿಕೇರಿ ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ತೆರಳು ಗ್ರಾಮದಿಂದ ಸೆರೆ ಹಿಡಿದು ಮೃಗಾಲಯದಲ್ಲಿ ರಕ್ಷಿಸಿ, ಮೃಗಾಲಯದ
ಪುನರ್ವಸತಿ ಕೇಂದ್ರದಲ್ಲಿ ಇರಿಸಲಾಗಿತ್ತು.
ಬ್ರಹ್ಮ ಹುಲಿಯನ್ನು ದಿವಂಗತ ಯೋಗ ಗುರು ಶ್ರೀ ಬಿ.ಕೆ.ಎಸ್ ಐಯ್ಯಂಗಾರ್ ಅವರು ಹುಲಿಯ ಜೀವಮಾನ ಪರ್ಯಂತರಕ್ಕೂ ದತ್ತು ಪಡೆದಿದ್ದರು. ಆದರೆ ಬ್ರಹ್ಮ ಹುಲಿಯು ವೃದ್ದಾಪ್ಯಕ್ಕೆ ಸಂಬಂಧಿಸಿದ ಕಾರಣಗಳಿಂದ ಶುಕ್ರವಾರ ಮಧ್ಯಾಹ್ನ 3 ಗಂಟೆಯಲ್ಲಿ ಮೃತಪಟ್ಟಿದೆ.
ಪ್ರಸ್ತುತ ಮೃಗಾಲಯದಲ್ಲಿ 10 ಗಂಡು ಹುಲಿ ಹಾಗೂ 6 ಹೆಣ್ಣು ಹುಲಿಗಳಿಗೆ ಪಾಲನೆ ಮಾಡಲಾಗುತ್ತಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜೀತ್ ಕುಲಕರ್ಣಿ ತಿಳಿಸಿದ್ದಾರೆ.