ಕ್ಯಾನ್ಬೆರಾ, ಡಿ. 04: ಕೆ.ಎಲ್.ರಾಹುಲ್(51) ಹಾಗೂ ಜಡೇಜಾ(44*) ಜವಾಬ್ದಾರಿಯುತ ಬ್ಯಾಟಿಂಗ್ ಹಾಗೂ ಬೌಲರ್ಗಳ ಸಾಂಘಿಕ ಪ್ರದರ್ಶನದ ಮೂಲಕ ಆಸೀಸ್ ವಿರುದ್ಧ ಪ್ರಾಬಲ್ಯ ಮೆರೆದ ಕೊಹ್ಲಿ ಪಡೆ ಮೊದಲ ಟಿ20 ಪಂದ್ಯದಲ್ಲಿ 11 ರನ್ಗಳ ಭರ್ಜರಿ ಗೆಲುವು ಸಾಧಿಸಿತು. ಕ್ಯಾನ್ಬೆರಾದ ಮನುಕ ಓವೆಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ, 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 161 ರನ್ಗಳಿಸಿತು.
ಈ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 150 ರನ್ಗಳಿಸುವ ಮೂಲಕ ಸೋಲೊಪ್ಪಿಕೊಂಡಿತು. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿತು. ಪಂದ್ಯದಲ್ಲಿ ‘ಕಂಕಷನ್’ ನಿಯಮದ ಪ್ರಕಾರ ಕಣಕ್ಕಿಳಿದ ಯಜುವೇಂದ್ರ ಚಹಲ್, ಆಸ್ಟ್ರೇಲಿಯಾದ ಪ್ರಮುಖ ಮೂರು ವಿಕೆಟ್ ಪಡೆದು ಭಾರತದ ಗೆಲುವಿಗೆ ಕಾರಣರಾದರು. 25 ರನ್ ನೀಡಿ 3 ವಿಕೆಟ್ ಪಡೆದ ಚಹಲ್, ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಸರಣಿಯ 2ನೇ ಪಂದ್ಯ ಡಿ.6ರಂದು ಸಿಡ್ನಿಯಲ್ಲಿ ನಡೆಯಲಿದೆ.