ವರ ಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ನಟ ಧನಂಜಯ್ ಅಭಿನಯದ “ರತ್ನನ್ ಪ್ರಪಂಚ” ಹೊಸ ಚಿತ್ರ ಶುಕ್ರವಾರ ಘೋಷಣೆಯಾಗಿದೆ. ಯೋಗಿ ಜಿ. ರಾಜ್, ಕಾರ್ತಿಕ್ ಗೌಡ ನಿರ್ಮಾಣದ ಈ ಚಿತ್ರಕ್ಕೆ ರೋಹಿತ್ ಪದಕಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಮೂಲಕ ಡಾಲಿ ಧನಂಜಯ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಮೊದಲ ಬಾರಿಗೆ ಜೊತೆಯಾಗಿ ಅಭಿನಯಿಸುತ್ತಿದ್ದಾರೆ. ತಮ್ಮ ಹೊಸ ಚಿತ್ರ ಆರಂಭವಾದ ಬಗ್ಗೆ ನಟ ಧನಂಜಯ ಟ್ವಿಟರ್ ನಲ್ಲಿ ಸಂತಸ ಹಂಚಿಕೊಂಡಿದ್ದಾರೆ.
ಮತ್ತೊಂದೆಡೆ ರಾಜ್ಯದಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಚಿತ್ರೀಕರಣ ಶೀಘ್ರವೇ ಆರಂಭಗೊಳ್ಳಲಿದೆ. ಪ್ರಮುಖವಾಗಿ ರಾಲಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್-2 ಚಿತ್ರದ ಚಿತ್ರೀಕರಣ ಆಗಸ್ಟ್ 16ರಿಂದ ಪುನರಾರಂಭಗೊಳ್ಳಲಿದೆ. ಇನ್ನೂ ರೋರಿಂಗ್ ಸ್ಟಾರ್ ಶ್ರೀಮುರುಳಿ ಅಭಿನಯದ ಮದಗಜ ಚಿತ್ರದ ಚಿತ್ರೀಕರಣ ಆಗಸ್ಟ್ 10ರಿಂದ ಬೆಂಗಳೂರಿನ ಮಿನರ್ವ ಮಿಲ್ ನಲ್ಲಿ ಶುರುವಾಗಲಿದೆ. ಆ ಮೂಲಕ ತಿಂಗಳುಗಳಿಂದ ತಣ್ಣಗಾಗಿದ್ದ ಸ್ಯಾಂಡಲ್ ವುಡ್ ನಲ್ಲಿ ಚಿತ್ರೀಕರಣದ ಭರಾಟೆ ಆರಂಭಗೊಳ್ಳಲಿದೆ.