ಬೆಂಗಳೂರು, ಅ. 23: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ರಾಜ್ಯದಲ್ಲಿ ಈಗಾಗಲೇ ಮಳೆಯ ಆರ್ಭಟ ಜೋರಾಗಿದ್ದು, ಮೂರು ದಿನಗಳಿಂದ ಸತತವಾಗಿ ಮಳೆಯಾಗುತ್ತಿದೆ. ಇನ್ನು ಮುಂದಿನ ಮೂರು ದಿನಗಳ ಕಾಲ ಮಳೆ ಮುಂದುವರಿಯಲಿದೆ. ಕರಾವಳಿಯ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದಲ್ಲಿ ಮುಂದಿನ 72 ಗಂಟೆ ಕಾಲ ಗುಡುಗು-ಮಿಂಚು ಸಹಿತ ಭಾರಿ ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ತಿಳಿಸಿದೆ.
ದಕ್ಷಿಣ ಒಳನಾಡಿನ ಬೆಂಗಳೂರು, ಬೆಂ. ಗ್ರಾಮಾಂತರ, ಚಿಕ್ಕ ಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ ಮತ್ತು ತುಮಕೂರಿನಲ್ಲಿ ಮುಂದಿನ 48 ಗಂಟೆ ಹಾಗೂ ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೊಡಗು ಮತ್ತು ಹಾಸನದಲ್ಲಿ ಅ.25ರಂದು ಯೆಲ್ಲೋ ಅಲರ್ಟ್ ಇರಲಿದೆ. ಉತ್ತರ ಒಳನಾಡಿನ ಕೆಲ ಭಾಗಗಳಲ್ಲಿ ಚದುರಿದಂತೆ ಸಾಧಾರಣ ಮಳೆಯಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಹಿಂಗಾರು ಮಳೆ: ಅ.28ರಿಂದ ಹಿಂಗಾರು ಮಳೆ ಆರಂಭವಾಗಲಿದ್ದು, ಡಿ.31ರವರೆಗೆ ಮುಂದುವರಿಯಲಿದೆ. ಡಿಸೆಂಬರ್ ಮೊದಲ ವಾರದಲ್ಲಿ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದ್ದು, ಭಾರಿ ಮಳೆಯಾಗುವ ನಿರೀಕ್ಷೆ ಇದೆ. ಸಾಮಾನ್ಯವಾಗಿ ನವೆಂಬರ್ ಮೊದಲ ವಾರದಲ್ಲಿ ಹಿಂಗಾರು ಮಳೆ ಆರಂಭವಾಗುತ್ತಿತ್ತು. ಆದರೆ, ಈ ಬಾರಿ ಬೇಗ ಆರಂಭವಾಗಿದೆ. ರಾಜ್ಯದಲ್ಲಿ ಈಗಾಗಲೇ ಮುಂಗಾರು ಮಳೆ ಮುಗಿದಿದ್ದರೂ ಮಳೆ ಅಬ್ಬರವೂ ಇನ್ನೂ ನಿಂತಿಲ್ಲ ಎಂದು ಇಲಾಖೆ ನಿರ್ದೇಶಕ ಸಿ.ಎಸ್. ಪಾಟೀಲ್ ಮಾಹಿತಿ ನೀಡಿದ್ದಾರೆ.