ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವದ ಬದಲಾವಣೆಗೆ ಒತ್ತಾಯ ಕೇಳಿ ಬಂದಿರುವ ಹಿನ್ನೆಲೆಯಲ್ಲಿ, ಎಐಸಿಸಿ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಅವರನ್ನು ನೇಮಿಸುವಂತೆ ಒತ್ತಾಯಿಸಿ, ಸೋನಿಯಾ ಗಾಂಧಿ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
ಕಾಂಗ್ರೆಸ್‍ನಲ್ಲಿ ನಾಯಕತ್ವ ಬದಲಾವಣೆಯ ಕೂಗು ಕೇಳಿ ಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್ನ ಮಧ್ಯಂತರ ಅಧ್ಯಕ್ಷೆಯಾಗಿರುವ ಸೋನಿಯಾ ಗಾಂಧಿ ಸೋಮವಾರ ಪಕ್ಷದ ಉನ್ನತ ಸ್ಥಾನದಿಂದ ಕೆಳಗಿಳಿಯಲ್ಲಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯುತ್ತಿದ್ದು ಮುಂದಿನ ಅಧ್ಯಕ್ಷರ ಆಯ್ಕೆಗೆ ಕಸರತ್ತು ಆರಂಭವಾಗಿದೆ. ಈ ನಡುವೆ ರಾಹುಲ್ ಗಾಂಧಿ ಪರ ಸಿದ್ದರಾಮಯ್ಯ ಬ್ಯಾಟಿಂಗ್ ಮಾಡಿದ್ದಾರೆ.
ರಾಹುಲ್ ಗಾಂಧಿ ಅವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಮಾಡುವ ಕುರಿತು ಪತ್ರ ಬರೆದಿರುವ ಸಿದ್ದರಾಮಯ್ಯ, ಗಾಂಧಿ ಕುಟುಂಬದವರಿಂದ ಮಾತ್ರ ಪಕ್ಷ ಉಳಿಸಲು ಸಾಧ್ಯ. ಗಾಂಧಿ ಕುಟುಂಬವೇ ಪಕ್ಷವನ್ನ ಮುನ್ನಡೆಸಬೇಕು. ನೀವೇ ಎಐಸಿಸಿ ಅಧ್ಯಕ್ಷರಾಗಿ ಮುಂದುವರಿಯಬೇಕು. ನಿಮ್ಮ ಆರೋಗ್ಯ ಸಹಕರಿಸದಿದ್ದರೆ ರಾಹುಲ್ ಗಾಂಧಿ ಅವರಿಗೆ ಜವಾಬ್ದಾರಿ ವಹಿಸಿ. ಎಐಸಿಸಿ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಅವರು ಅಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿಕೊಳ್ಳುವಂತೆ ಮನವೊಲಿಸಿ ಎಂದು ಸೋನಿಯಾ ಗಾಂಧಿ ಅವರ ಬಳಿ ಕೋರಿದ್ದಾರೆ.ದೇಶದಲ್ಲಿ ಇಂದು ಅಘೋಷಿತ ತುರ್ತ ಪರಿಸ್ಥಿತಿ ಎದುರಾಗಿದ್ದು, ಈ ಹಿಂದೆ ದೇಶದಲ್ಲಿ ತುರ್ತು ಪರಿಸ್ಥಿತಿ ಎದುರಾದಾಗ ಗಾಂಧಿ ಕುಟುಂಬವೇ ಕಾಂಗ್ರೆಸ್ ನಾಯಕತ್ವ ವಹಿಸಿಕೊಂಡಿತ್ತು. ಹೀಗಾಗಿ ಈಗಲೂ ಸಹ ಗಾಂಧಿ ಕುಟುಂಬವೇ ಪಕ್ಷವನ್ನು ಮೇಲೆತ್ತಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.