ಲೆಬನಾನ್ ರಾಜಧಾನಿ ಬೈರುತ್ ನಗರದ ಬಂದರು ಪ್ರದೇಶದಲ್ಲಿ ಮಂಗಳವಾರ ಸಂಜೆ ಭಾರೀ ಸ್ಪೋಟ ಸಂಭವಿಸಿದೆ.
ಬೈರುತ್ ನಗರದ ಬಂದರಿನಲ್ಲಿ ಸಂಭವಿಸಿರುವ ಭಾರೀ ಸ್ಪೋಟವು ಲೆಬನಾನ್ ದೇಶದ ಜನರಲ್ಲಿ ದೊಡ್ಡ ಆತಂಕವನ್ನೇ ಸೃಷ್ಟಿಸಿದೆ. ಈ ಸ್ಪೋಟದಲ್ಲಿ 70 ಮಂದಿ ಮೃತಪಟ್ಟಿದ್ದು, 400ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಸ್ಪೋಟದ ವೀಡಿಯೋ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಭಾರೀ ಸ್ಪೋಟ ಸಂಭವಿಸುತ್ತಿದ್ದಂತೆ ಆಕಾಶದೆತ್ತರಕ್ಕೆ ದಟ್ಟವಾದ ಹೊಗೆ ಹಾರಿದ್ದು, ಶಬ್ಧದ ತೀವ್ರತೆ ದೊಡ್ಡ ತರಂಗಗಳನ್ನು ಸೃಷ್ಟಿಸಿದೆ. ಈ ಸ್ಪೋಟದಿಂದ ಬಂದರು ಪ್ರದೇಶದಲ್ಲಿದ್ದ ಗೋದಾಮುಗಳು ಕಿಟಕಿ ಗಾಜುಗಳು ಮತ್ತು ಬಾಗಿಲುಗಳು ಹಾನಿಗೊಳಗಾಗಿವೆ. ಸ್ಪೋಟದ ತೀವ್ರತೆಗೆ ಘಟನೆ ನಡೆದ ಹಲವು ಕಿ.ಮೀ ವ್ಯಾಪ್ತಿಯಲ್ಲಿ ಮನೆಗಳು ಸಹ ಹಾನಿಗೊಳಗಾಗಿದೆ ಎನ್ನಲಾಗಿದೆ.
ಆದರೆ ಸ್ಪೋಟದ ರೂವಾರಿ ಯಾರು? ಮತ್ತು ಸ್ಪೋಟಕ್ಕೆ ಕಾರಣ ಏನು? ಎಂಬ ಕುರಿತು ಈವರೆಗೆ ತಿಳಿದುಬಂದಿಲ್ಲ ಎಂದು ಲೆಬನಾನ್ ಸರ್ಕಾರದ ಅಧಿಕಾರಿಗಳು ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಆದರೆ ನೋಡುಗರ ಎದೆಯಲ್ಲಿ ನಡುಕ ಹುಟ್ಟಿಸುವ ಈ ವೀಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.