ಬೆಂಗಳೂರು, ಅ.16: ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರ ಪತ್ನಿ ಹಾಗೂ ಆದಿತ್ಯ ಆಳ್ವ ಸೋದರಿ ಪ್ರಿಯಾಂಕಾ ಆಳ್ವ ಒಬೆರಾಯ್‌ಗೆ ಸ್ಯಾಂಡಲ್ ವುಡ್ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ನೊಟೀಸ್ ನೀಡಿದೆ.
ಸ್ಯಾಂಡಲ್‌ವುಡ್ ಡ್ರಗ್ ಪ್ರಕರಣ ವಿಚಾರಣೆ ಆರಂಭವಾದಾಗಿನಿಂದ ಪದೇ ಪದೇ ಮಾಜಿ ಸಚಿವ ಜೀವರಾಜ್ ಆಳ್ವ ಪುತ್ರ ಆದಿತ್ಯ ಆಳ್ವ ಹೆಸರು ಕೇಳಿಬರುತ್ತಿದ್ದು, ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ. ಈಗಾಗಲೇ ಆದಿತ್ಯ ಆಳ್ವ ವಿರುದ್ಧ ಲುಕ್ ಔಟ್ ನೊಟೀಸ್ ಜಾರಿ ಮಾಡಲಾಗಿದ್ದು ಪೊಲೀಸರು ಆತನಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.
ಸಿಸಿಬಿ ಪೊಲೀಸರು ಕಳೆದ ತಿಂಗಳು ನಗರದ ಹೆಬ್ಬಾಳ ಬಳಿ ಇರುವ ಆದಿತ್ಯ ಆಳ್ವಗೆ ಸೇರಿದ ರೆಸಾರ್ಟ್ ಮೇಲೆ ದಾಳಿ ನಡೆಸಿ ಈಗಾಗಲೇ ಹಲವು ಮಹತ್ವದ ಅಂಶಗಳನ್ನು, ದಾಖಲೆಗಳನ್ನು ಕಲೆ ಹಾಕಿದ್ದರು. ಆದಿತ್ಯ ಆಳ್ವ, ಮುಂಬೈಯಲ್ಲಿರುವ ತನ್ನ ಸೋದರಿ ಪ್ರಿಯಾಂಕ ಆಳ್ವ ಒಬೆರಾಯ್ ಮನೆಯಲ್ಲಿ ಆಶ್ರಯ ಪಡೆದಿದ್ದಾನೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ನಿನ್ನೆ ಕೋರ್ಟ್‌ನಿಂದ ಸರ್ಚ್ ವಾರಂಟ್ ಪಡೆದು ಬೆಂಗಳೂರು ಸಿಸಿಬಿ ಪೊಲೀಸರು ಮುಂಬೈಯಲ್ಲಿರುವ ನಟ ವಿವೇಕ್ ಒಬೆರಾಯ್ ಮನೆ ಮೇಲೆ ದಾಳಿ ನಡೆಸಿದ್ದರು. ಇದೀಗ ಸೋದರನ ಮೇಲಿನ ಡ್ರಗ್ ಕೇಸಿನ ಆರೋಪಕ್ಕೆ ಸಂಬಂಧಪಟ್ಟಂತೆ ಪ್ರಿಯಾಂಕಾ ಆಳ್ವಗೆ ನೊಟೀಸ್ ನೀಡಿ ವಿಚಾರಣೆಗೆ ಬರುವಂತೆ ಸೂಚಿಸಿದ್ದಾರೆ.