ಬೆಂಗಳೂರು: ಶಾಲೆಗಳನ್ನು ಪುನರಾರಂಭಿಸುವ ಬಗ್ಗೆ ಸರಕಾರಕ್ಕೆ ಯಾವುದೇ ಧಾವಂತ ಇಲ್ಲ. ಸದ್ಯಕ್ಕೆ ಶಾಲೆ ಕಾಲೇಜುಗಳನ್ನು ಆರಂಭಿಸುವ ಬಗ್ಗೆ ನಿರ್ಧಾರ ಕೈಗೊಂಡಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಕಳೆದ 6 ತಿಂಗಳುಗಳಿಂದ ಶಾಲಾ ಕಾಲೇಜುಗಳು ಮುಚ್ಚಿದ್ದು ಕರ್ನಾಟಕದಲ್ಲಿ ಇನ್ನೂ ತೆರೆದಿಲ್ಲ. ಈ ಬಗ್ಗೆ ಪೋಷಕರು ಮಕ್ಕಳು ಗೊಂದಲಕ್ಕೀಡಾಗಿದ್ದು ಈಗಾಗಲೇ ಶಾಲಾ ಕಾಲೇಜುಗಳ ಪುನರಾರಂಭದ ಬಗ್ಗೆ ಮಹತ್ವದ ಹೇಳಿಕೆಯನ್ನು ಸಚಿವ ಸುರೇಶ್ ಕುಮಾರ್ ನೀಡಿದ್ದಾರೆ.
ಕೊರೋನಾ ಸೋಂಕು ಹೆಚ್ಚುತಿರುವ ಹಿನ್ನಲೆಯಲ್ಲಿ ಪೋಷಕರು ವಿದ್ಯಾರ್ಥಿಗಳು ಗೊಂದಲಕ್ಕೊಳಗಾಗಿದ್ದಾರೆ. ಈ ಗೊಂದಲ ಸದ್ಯಕ್ಕೆ ಬೇಡ. ಸರ್ಕಾರ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈಗಾಗಲೇ ಸುಮಾರು 40 ಜನ ಶಾಸಕರ ಜೊತೆ ಚರ್ಚಿಸಿದ್ದೇವೆ. ಅವರಿಂದಲೂ ಅಭಿಪ್ರಾಯದ ಸಂಗ್ರಹಣೆ ಆಗಿದೆ. ಒಂದು ವೇಳೆ ಶಾಲೆ ಆರಂಭಿಸುವುದಾದರೆ ಯಾವ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವ ಬಗ್ಗೆ ಮಾತಾಡಿದ್ದೇನೆ.
ಸಂಸದರ ಜೊತೆಯೂ ಚರ್ಚೆ ಮಾಡಲಿದ್ದೇನೆ. ಶಾಲೆಗಳು ವಿಳಂಭವಾದಷ್ಟೂ ಬಾಲ್ಯ ವಿವಾಹಗಳು ಹೆಚ್ಚುವ ಸಾದ್ಯತೆಗಳಿವೆ. ಹಾಗೂ ಮಕ್ಕಳು ಕೂಲಿ ಕೆಲಸ ಆರಂಭಿಸುವ ಸಾಧ್ಯತೆಯೂ ಇದೆ. ಈ ಬಗ್ಗೆ ನನಗೆ ಆತಂಕವಿದೆ. ಆದರೆ ಕೊರೋನಾ ಸೋಂಕು ತೀವೃವಾಗಿ ಹೆಚ್ಚುತ್ತಿದ್ದು ;ಈ ಬಗ್ಗೆ ಮಕ್ಕಳ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕಾಗಿದೆ. ಪೋಷಕರೂ ಈ ಬಗ್ಗೆ ಭಯಪಡುತ್ತಿದ್ದಾರೆ, ಗೊಂದಲಕ್ಕೊಳಗಾಗುತ್ತಿದ್ದಾರೆ. ಮಕ್ಕಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.