ವಾಣಿಜ್ಯ ನಗರಿ ಮುಂಬೈ ಅನ್ನು ಮಿನಿ ಪಾಕಿಸ್ತಾನ ಎನ್ನುವ ಮೂಲಕ ವಿವಾದಕ್ಕೆ ಗುರಿಯಾಗಿರುವ ನಟಿ ಕಂಗನಾ ರಾಣಾವತ್, ಬುಧವಾರ ಮಹಾರಾಷ್ಟ್ರಕ್ಕೆ ಮರಳುತ್ತಿದ್ದಾರೆ. ಈ ನಡುವೆ ತಮ್ಮ ಟ್ವಿಟರ್ನಲ್ಲಿ ಫೋಟೋವೊಂದನ್ನು ಶೇರ್ ಮಾಡಿರುವ ಕಂಗನಾ, ಮುಂಬೈ ಮಹಾನಗರವನ್ನು ಪಾಕಿಸ್ತಾನ ಎಂದು ಬರೆದುಕೊಂಡಿದ್ದಾರೆ.
ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆ ಸಂಬಂಧ ಶಿವಸೇನೆ ಹಾಗೂ ಕಂಗನಾ ನಡುವೆ ವಾಕ್ಸಮರ ನಡೆದಿದ್ದು, ಅವರು ಮುಂಬೈ ಅನ್ನು ಮಿನಿ ಪಾಕಿಸ್ತಾನ ಎಂದು ಕರೆದಿದ್ದರು. ಈ ನಡುವೆ ಹುಟ್ಟೂರಾದ ಹಿಮಾಚಲ ಪ್ರದೇಶದಿಂದ ಇಂದು ಮುಂಬೈಗೆ ಬರಲಿರುವ ಅವರು ಮಂಡಿ ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದು ವರದಿ ನೆಗೆಟಿವ್ ಬಂದಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಈ ಕುರಿತು ಟ್ವೀಟ್ ಮಾಡಿರುವ ಅವರು ಸಿನಿಮಾಗಳಲ್ಲಿ ರಾಣಿ ಲಕ್ಷ್ಮಿಭಾಯಿ ಪಾತ್ರ ನಿರ್ವಹಿಸಿ ಆಕೆಯ ಧೈರ್ಯವನ್ನು ಕಲಿತಿದ್ದೇನೆ ಎಂದು ಪೋಸ್ಟ್ ಮಾಡಿದ್ದಾರೆ. ಹಿಮಾಚಲ ಪ್ರದೇಶ ಸರ್ಕಾರವು ಸದ್ಯ ಕಂಗನಾಗೆ ವೈ ಪ್ಲಸ್ ಮಟ್ಟದ ಭದ್ರತೆ ನೀಡಿದ್ದು ಇದೀಗ ಕರ್ಮಭೂಮಿಯಾದ ಮುಂಬೈಗೆ ಬರುವ ಸಾಹಸ ಮಾಡುತ್ತಿದ್ದಾರೆ.
ಟ್ವೀಟ್ನಲ್ಲಿ ಕಂಗನಾ ಕಿಡಿ
ಈಗಾಗಲೇ ಮುಂಬೈ ನಗರಕ್ಕೆ ಹೊರಟಿರುವ ನಟಿ ಕಂಗನಾ, ನಿರ್ಮಾಣ ಹಂತದಲ್ಲಿದ್ದ ತಮ್ಮ ಕಚೇರಿಯನ್ನು ಸ್ಥಳೀಯ ಪಾಲಿಕೆ ಸಿಬ್ಬಂದಿ ತೆರವು ಮಾಡುತ್ತಿರುವ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ “ನಾನು ಹೇಳಿರುವುದರಲ್ಲಿ ಸುಳ್ಳಿಲ್ಲ, ನನ್ನ ವೈರಿಗಳು ಮುಂಬೈ ಏಕೆ ಪಿಒಕೆ(ಪಾಕ್ ಆಕ್ರಮಿತ ಕಾಶ್ಮೀರ) ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಬರೆಯುವ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.