ನಮ್ಮೆಲ್ಲಾ ಕಾಂಗ್ರೆಸ್ ಶಾಸಕರು ಒಂದಾಗಿದ್ದೇವೆ. ಶೀಘ್ರದಲ್ಲೇ ಅಧಿವೇಶನ ಕರೆದು, ಬಹುಮತ ಸಾಬೀತು ಪಡಿಸಲಿದ್ದೇವೆ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜಸ್ಥಾನದಲ್ಲಿ ಉಂಟಾಗಿರುವ ರಾಜಕೀಯ ಅಸ್ಥಿರತೆ ಮುಂದುವರಿದಿದ್ದು, ಇದರ ನಡುವೆಯೂ ತಮ್ಮ ಸರ್ಕಾರವನ್ನು ಉಳಿಸಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿರುವ ಗೆಹ್ಲೋಟ್, ನಮಗೆ ಸಂಪೂರ್ಣ ಬಹುಮತವಿದ್ದು, ಆದಷ್ಟು ಶೀಘ್ರ ನಾವು ಅಧಿವೇಶನ ಕರೆಯುವುದಾಗಿ ಅಭಿಪ್ರಾಯಪಟ್ಟಿದ್ದಾರೆ.
ಡಿಸಿಎಂ ಆಗಿದ್ದ ಸಚಿನ್ ಪೈಲಟ್ ಸರ್ಕಾರದ ವಿರುದ್ಧ ತಿರುಗಿ ನಿಂತ ನಂತರ ರಾಜಕೀಯ ಅಸ್ಥಿರತೆ ಎದುರಾಗಿತ್ತು. ಸಚಿನ್ ಪೈಲಟ್ ಅವರನ್ನು ಡಿಸಿಎಂ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಈ ಮಧ್ಯೆ ಸ್ಪೀಕರ್ ಸಚಿನ್ ಪೈಲಟ್ ಮತ್ತು ಬೆಂಬಲಿಗ ಶಾಸಕರಿಗೆ ಅನರ್ಹತೆಯ ನೋಟಿಸ್ ನೀಡಿದ್ದರು. ಈ ವಿಚಾರ ಈಗ ಕೋರ್ಟ್ ಮೆಟ್ಟಿಲೇರಿದೆ.
ಸಚಿನ್ ಪೈಲಟ್ ಬೆಂಬಲಿತ ಶಾಸಕರು ಇಲ್ಲದ ಹೊರತಾಗಿಯೂ ವಿಶ್ವಾಸಮತ ಯಾಚನೆಗೆ ನಮಗೆ ಅಗತ್ಯವಾದ ಸಂಖ್ಯಾಬಲ ಇದೆ. ಹೀಗಾಗಿ ಸೂಕ್ತ ಸಮಯದಲ್ಲಿ ಅಧಿವೇಶನ ಕರೆಯುತ್ತೇವೆ. ಅಧಿವೇಶನ ಕರೆದಾಗ ಭಿನ್ನಮತೀಯ ಶಾಸಕರೂ ಸಹ ಪಾಲ್ಗೊಳ್ಳಲಿದ್ದಾರೆ ಸಿಎಂ ಗೆಹ್ಲೋಟ್ ಎಂದು ತಿಳಿಸಿದ್ದಾರೆ