ನಮ್ಮ ತಪ್ಪಿನಿಂದ ಯಾವ ನ್ಯೂನತೆ ಆಗದಂತೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ವಿದೇಶದಿಂದ ಬಂದವರ ಆರೋಗ್ಯ ತಪಾಸಣೆ ಸರಿಯಾಗಿ ಆಗುತ್ತಿಲ್ಲ. ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರು ಹೇಳಿದರು. ಇಂದು ನಡೆದ ಸರ್ವಪಕ್ಷ ಸಭೆಯಲ್ಲಿ ಮಾತನಾಡಿದ ಅವರು ಕೊರೊನಾ ಕುರಿತು ಸರ್ಕಾರದ ಮಾಹಿತಿಯೂ ಅಸ್ಪಷ್ಟವಾಗಿದೆ. ೨೩ ಸಾವಿರ ಮಂದಿ ಪೈಕಿ ೪.೫೦೦ ಮಂದಿಯನ್ನು ಇನ್ನೂ ಗುರುತಿಸಬೇಕಿದೆ ಎಂದು ಸರ್ಕಾರ ಹೇಳಿದೆ. ಅವರನ್ನು ಕೂಡಲೇ ಪತ್ತೆ ಮಾಡಬೇಕು.
ಮೂರನೇ ಹಂತಕ್ಕೆ ನಾವು ಇನ್ನೂ ಹೋಗಿಲ್ಲ ಎಂದು ಸಚಿವರು ಹೇಳಿದ್ದಾರೆ. ನಂಜನಗೂಡಿನಲ್ಲಿ ಒಬ್ಬ ವ್ಯಕ್ತಿಗೆ ಸೋಂಕು ತಗುಲಿದೆ. ಆದರೆ. ಆತನಿಗೆ ವಿದೇಶದಿಂದ ಬಂದವರ ಸಂಪರ್ಕ ಇರಲಿಲ್ಲ. ಆದರೂ ಕರೋನ ಹೇಗೆ ಬಂತು ಎಂಬುದನ್ನು ಪತ್ತೆ ಮಾಡಬೇಕು. ಶಿರಾದಲ್ಲಿಯೂ ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದಾರೆ. ಈ ಇಬ್ಬರಿಗೂ ಸೋಂಕು ಯಾವ ಹಂತದಲ್ಲಿತ್ತು ಎಂಬುನ್ನು ಹೇಳಬೇಕು. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.
ಮಾಸ್ಕ್, ಸ್ಯಾನಿಟೈಸರ್, ಪಿಪಿಇ, ಟೆಸ್ಟಿಂಗ್ ಕಿಟ್ ಗಳು ಸಾಕಷ್ಟು ಪ್ರಮಾಣದಲ್ಲಿ ಇಲ್ಲ. ಬಂದಿರುವುದೂ ಗುಣಮಟ್ಟದ್ದಲ್ಲ. ಏಪ್ರಿಲ್ ಒಂದರಿAದ ಆಹಾರ ಧಾನ್ಯ ಉಚಿತವಾಗಿ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಸಮರ್ಪಕವಾಗಿ ವಿತರಣೆಯಾಗುವಂತೆ ರಾಜ್ಯ ಸರ್ಕಾರ ನೋಡಿಕೊಳ್ಳಬೇಕು.
ಮನೆ ಮನೆಗೆ ಅಗತ್ಯ ವಸ್ತು ತಲುಪಿಸುವ ವ್ಯವಸ್ಥೆ ಮಾಡಿದರೆ ಒಳ್ಳೆಯದು. ಪೊಲೀಸರಿಗೆ ಈಗ ಪ್ರಾಣ ಸಂಕಟ. ಲಾಠಿ ಪ್ರಹಾರ ಮಾಡಬಾರದು ಎಂದು ನಾವೂ ಹೇಳಿದ್ದೇವೆ. ಅಮಾಯಕರ ಮೇಲೆ ಬಲ ಪ್ರಯೋಗ ಬೇಡ.
ಪೊಲೀಸರಿಗೂ ವಿಮೆ ಮಾಡಿಸುವುದು ಸೂಕ್ತ. ಈ ಕುರಿತು ಸಿಎಂ ಪ್ರಧಾನಿಗಳ ಜೊತೆ ಮಾತನಾಡಲಿ. ಪೊಲೀಸರ ಜೀವಕ್ಕೂ ಭದ್ರತೆ ಬೇಕು. ಪೌರ ಕಾರ್ಮಿಕರಿಗೂ ವಿಮೆ ಸೌಲಭ್ಯ ಸಿಗಬೇಕು. ಈಗ ದಾಸ್ತಾನಾಗಿರುವುದು ಯಾವುದಕ್ಕೂ ಸಾಲದು. ಸೋಂಕು ವೇಗವಾಗಿ ಹರಡುವ ಸಾಧ್ಯತೆ ಇದೆ. ಹೀಗಾಗಿ ಮಾಸ್ಕ್ ತಯಾರಿಕೆ ಕೆಲಸ ಭರದಿಂದ ಸಾಗಬೇಕಿದೆ. ಗಾರ್ಮೆಂಟ್ಸ್ ಫ್ಯಾಕ್ಟರಿಗಳಿಗೆ ಆ ಕೆಲಸ ವಹಿಸಿ. ಮೂರನೇ ಹಂತಕ್ಕೆ ಹೋಗುವುದನ್ನು ತಡೆಯುವ, ಅದನ್ನು ನಿಭಾಯಿಸುವ ಕೆಲಸ ಸಮರೋಪಾದಿಯಲ್ಲಿ ಆಗಬೇಕಿದೆ.
ಅಗತ್ಯ ಪ್ರಮಾಣದ ಮಾಸ್ಕ್, ಸ್ಯಾನಿಟೈಸರ್ ಈಗಾಗಲೇ ಇರಬೇಕಿತ್ತು. ವೈದ್ಯರು ಮತ್ತು ಸಿಬ್ಬಂದಿಯ ಆರೋಗ್ಯ ಕಾಪಾಡುವುದು ನಮ್ಮ ಜವಾಬ್ದಾರಿ. ಕರ್ನಾಟಕದಲ್ಲಿ ೬೦೨೦ ಪಂಚಾಯಿತಿಗಳಿವೆ. ಒಂದೊOದು ಪಂಚಾಯಿತಿಗೆ ಒಬ್ಬ ಮೆಡಿಕಲ್ ಅಧಿಕಾರಿ ನೇಮಕ ಮಾಡಬೇಕು. ಆಹಾರ, ಕೃಷಿ ಮಾರುಕಟ್ಟೆ ಹಾಗೂ ಕೃಷಿ ಅಧಿಕಾರಿಯನ್ನೂ ಪಂಚಾಯಿತಿಗೆ ಒಬ್ಬರಂತೆ ನೇಮಕ ಮಾಡಬೇಕು.
ಸಾಮಾಜಿಕ ಅಂತರ ಕಾಪಾಡುವುದೂ ಮುಖ್ಯ. ಅದೇ ರೀತಿ ರೈತರ ಹಿತವನ್ನೂ ಕಾಯಬೇಕು. ಏಪ್ರಿಲ್, ಮೇ ತಿಂಗಳಲ್ಲಿ ಮುಂಗಾರು ಪೂರ್ವ ಬಿತ್ತನೆ ಆರಂಭವಾಗುತ್ತೆ ಕೆಲವು ಜಿಲ್ಲೆಗಳಲ್ಲಿ. ಕೃಷಿ ಚಟುವಟಿಕೆ ನಿಲ್ಲದಂತೆ ನೋಡಿಕೊಳ್ಳಿ. ಬಿತ್ತನೆಗೆ ಮುಂದಾಗುವವರಿಗೆ ಬೀಜ, ಗೊಬ್ಬರ ಸಿಗುವಂತಾಗಬೇಕು.
ಮು0ದಿನ ವಾರಗಳಲ್ಲಿ ಏನು ಮಾಡಬೇಕು?
ಬೆಂಗಳೂರು ನಗರದಲ್ಲಿ ವಲಸಿಗರು ಹೆಚ್ವಿನ ಸಂಖ್ಯೆಯಲ್ಲಿ ಇದ್ದಾರೆ. ಹೊರ ರಾಜ್ಯಗಳಲ್ಲಿ ಇದ್ದ ನಮ್ಮವರು ಇಲ್ಲಿಗೆ, ನಮ್ಮಲ್ಲಿರುವ ಹೊರ ರಾಜ್ಯಗಳವರು ಸ್ವಂತ ಊರುಗಳಿಗೆ ಹೋಗಲು ಪರದಾಡುತ್ತಿದ್ದಾರೆ. ಕನ್ನಡಿಗರನ್ನು ಹೊರ ರಾಜ್ಯಗಳಿಂದ ಕರೆ ತರಬೇಕು. ಈಗಾಗಲೇ ಸಾಕಷ್ಟು ಮಂದಿ ಗಡಿ ತಲುಪಿದ್ದಾರೆ. ಅವರಿಗೆ ರಕ್ಷಣೆ ನೀಡುವುದು ಅವಶ್ಯ. ಅವರ ಆರೋಗ್ಯ ತಪಾಸಣೆ ಮಾಡಿ ಊರುಗಳಿಗೆ ಕಳುಹಿಸುವುದು ಸೂಕ್ತ.
ಮುಂದಿನ ಎರಡು ವಾರ ಪರಿಸ್ಥಿತಿ ಕಠಿಣ. ಹೀಗಾಗಿ ಸೋಂಕು ಹರಡದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿ. ಈಗಾಗಲೇ ದೇಶಾದ್ಯಂತ ಲಾಕ್ ಡೌನ್ ಘೋಷಣೆಯಾಗಿದೆ. ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು.