ನವದೆಹಲಿ: ಎರಡು ವಾರಗಳ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೆ ಹಾಗೂ ಚಿತ್ರಹಿಂಸೆಗೆ ಒಳಗಾಗಿದ್ದ 19 ವರ್ಷದ ಯುವತಿ ಇಂದು (29-9-2020) ಮೃತಪಟ್ಟಿದ್ದಾರೆ. ನಾಲ್ವರು ಅತ್ಯಾಚಾರಿಗಳಿಂದ ನಾಲಿಗೆ ಕತ್ತರಿಸಲ್ಪಟ್ಟಿದ್ದು, ಹಾಗೂ ಮೂಳೆ ಮುರಿತಕ್ಕೂ ಒಳಗಾಗಿದ್ದು ದೆಹಲಿಯ ಆಸ್ಪತ್ರೆಯ ಐಸಿಯುನಲ್ಲಿ ಇಡಲಾಗಿದ್ದ ಯುವತಿಯು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ. ಆತ್ಯಾಚಾರ ಮಾಡಿದ್ದ ನಾಲ್ವರು ಆರೋಪಿಗಳೂ ಇದೀಗ ಜೈಲಿನಲ್ಲಿದ್ದಾರೆ.
ಘಟನೆಯ ಕುರಿತಂತೆ ಉತ್ತರ ಪ್ರದೇಶದ ಪೋಲೀಸರು ಆರಂಭದಲ್ಲಿ ಸಹಾಯಕ್ಕೆ ಬರಲಿಲ್ಲ. ಸಾರ್ವಜನಿಕರ ಆಕ್ರೋಷದ ಬಳಿಕವಷ್ಟೆ ಪ್ರತಿಕ್ರಿಯಿಸಿದರು ಎಂದು ಮಹಿಳೆಯ ಕುಟುಂಬದವರು ಆರೋಪಿಸಿದ್ದಾರೆ. ಸೆ 14ರಂದು ದೆಹಲಿಯಿಂದ 200 ಕಿ ಮೀ ದೂರದ ಹಥ್ರಾಸ್ ಎಂಬ ಹಳ್ಳಿಯಲ್ಲಿ ಕುಟುಂದವರೊಂದಿಗೆ ಹುಲ್ಲು ಕೊಯ್ಯುತ್ತಿದ್ದಾಗ ಯುವತಿಯನ್ನು ಆಕೆಯ ದುಪಟ್ಟಾದಿಂದಲೇ ಕಟ್ಟಿ ಪಕ್ಕದ ಹೊಲಕ್ಕೆ ಎಳೆದೊಯ್ದು ಅತ್ಯಾಚಾರ ಮಾಡಿ ಹಲ್ಲೆ ಮಾಡಿದ್ದಾರೆಂದು ಯುವತಿಯ ಸಹೋದರ ಹೇಳಿದ್ದಾರೆ.
ಆಕೆಯು ಕಾಣಿಸದಿದ್ದ ಕಾರಣ ತನ್ನ ತಾಯಿ ಸುತ್ತಮುತ್ತ ಹುಡುಕಾಡಿದಾಗ ಪಕ್ಕದ ಹೊಲದಲ್ಲಿ ಪ್ರಜ್ಞಾಹೀನರಾಗಿ ಬಿದ್ದಿದ್ದರು ಎಂದು ಯುವತಿಯ ಸಹೋದರ ತಿಳಿಸಿದ್ದಾರೆ. ಈ ಪ್ರಕರಣವನ್ನು ಉತ್ತರ ಪ್ರದೇಶದ ಪೋಲೀಸರು ಅಲ್ಲಗಳೆದಿದ್ದು ನಾವು ಶೀರ್ಘವೇ ಓರ್ವ ಆರೋಪಿಯನ್ನು ಬಂಧಿಸಿದೆವು. ಬಳಿಕ ಇನ್ನುಳಿದ ಮೂವರನ್ನು ಬಂಧಿಸಿದೆವು ಎಂದು ಹಥ್ರಾಸ್ ಪೋಲೀಸ್ ಅಧಿಕಾರಿ ಪ್ರಕಾಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.