ಕೊಟ್ಟಾಯಂ: ಕೊರೊನಾ ಅಂದ್ರೆ ಯಾರಿಗೆ ಭಯ ಇಲ್ಲ ಹೇಳಿ. ಇಡೀ ಜಗತ್ತೇ ಮಾರಕ ವೈರಸ್ಗೆ ನಡುಗುತ್ತಿದೆ. ಆದರೆ, ಕೇರಳದ ವ್ಯಕ್ತಿಯೊಬ್ಬನಿಗೆ ಕೊರೊನಾದ ಭಯವಿಲ್ಲ.
ಕಳೆದ 10 ವರ್ಷದಿಂದ ಕೊರೊನಾ ಜೊತೆ ಖುಷಿಯಾಗಿ ಇವರು ಜೀವನ ಸಾಗಿಸುತ್ತಿದ್ದಾರೆ ಎಂದರೆ ನೀವು ನಂಬಲೇಬೇಕು. ಅರೆ ಅದು ಹೇಗೆ ಅಂತೀರಾ? ಕೊರೊನಾ ಎಂಬುದು ಇವರ ಪಾಲಿಗೆ ವೈರಸ್ ಅಲ್ಲ. ಬದಲಾಗಿ ಅವರ ಮುದ್ದಿನ ಮಡದಿ.
ಕೇರಳದ ಕೊಟ್ಟಾಯಂ ನಿವಾಸಿ ಶೈನ್ ಥಾಮಸ್ ಎನ್ನುವವರು ಕಳೆದ 10 ವರ್ಷದ ಹಿಂದೆಯೇ ಕೊರೊನಾ ಎನ್ನುವ ಮಹಿಳೆಯನ್ನು ಮದುವೆಯಾಗಿದ್ದಾರೆ.
ಶೈನ್ – ಕೊರೊನಾ ದಂಪತಿಗೆ ಈಗ ಇಬ್ಬರು ಗಂಡು ಮಕ್ಕಳಿದ್ದಾರೆ. ಕೊರೊನಾ ಇದೀಗ ಜಗತ್ತಿಗೆ ಪ್ರಸಿದ್ಧಿಯಾಗಿದೆ. ಆದರೆ ಹತ್ತು ವರ್ಷದಿಂದ ಜೊತೆಗೇ ಇದ್ದರೂ ಮಡದಿಯ ಹೆಸರು ಯಾರಿಗೂ ಅಚ್ಚರಿ ಎನಿಸಿರಲಿಲ್ಲ. ಈಗ ಇವರ ಹೆಸರಿನ ಬಗ್ಗೆ ತಮಾಷೆಯ ಮಾತುಗಳು ಕೇಳಿಬರುತ್ತಿವೆ.