ಲಕ್ನೋ, ಅ.13: ಹಥ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಅಲಹಾಬಾದ್ ಕೋರ್ಟ್ ನಿಂದ ದೆಹಲಿ ಅಥವಾ ಮುಂಬಯಿ ಕೋರ್ಟ್‌ಗೆ ವರ್ಗಾಯಿಸುವಂತೆ ಸಂತ್ರಸ್ತೆಯ ಕುಟುಂಬ ಮನವಿ ಮಾಡಿಕೊಂಡಿದೆ ಎಂದು ಸಂತ್ರಸ್ತೆ ಪರ ವಕೀಲೆ ಸೀಮಾ ಕುಶ್ವಾಹ ಹೇಳಿದ್ದಾರೆ.
ವಿಚಾರಣೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಕೀಲೆ ಸೀಮಾ ಖುಶ್ವಾಹ, ಸಂತ್ರಸ್ತೆ ಕುಟುಂಬವು ಪ್ರಕರಣವನ್ನು ಮುಂಬೈ ಕೋರ್ಟ್‌ಗೆ ವರ್ಗಾಯಿಸುವುದರ ಜತೆಗೆ ಸಿಬಿಐ ತನಿಖಾ ವರದಿಯನ್ನು ರಹಸ್ಯವಾಗಿ ಇಡಬೇಕು. ಈ ಪ್ರಕರಣವು ಸೂಕ್ತವಾದ ಅಂತ್ಯ ಕಾಣುವವರೆಗೂ ನಮಗೆ ಭದ್ರತೆ ಒದಗಿಸಬೇಕು ಎನ್ನುವ ಮೂರು ಬೇಡಿಕೆಗಳನ್ನು ಮುಂದಿಟ್ಟಿದೆ ಎಂದು ತಿಳಿಸಿದ್ದಾರೆ.
ಈ ಪ್ರಕರಣದ ಆರಂಭದಲ್ಲಿಯೇ ಲೈಂಗಿಕ ದೌರ್ಜನ್ಯ ಹಾಗೂ ಸಂತ್ರಸ್ತೆಯ ಶವ ಸಂಸ್ಕಾರದ ವಿಷಯದಲ್ಲಿ ಭಾರೀ ವಿವಾದ ಸೃಷ್ಟಿಯಾಗಿತ್ತು. ಪ್ರಕರಣದ ಸುತ್ತ ಹಲವಾರು ಊಹಾಪೋಹಗಳು, ಜಟಿಲ ಪ್ರಶ್ನೆಗಳು ಸೃಷ್ಟಿಯಾದ್ದರಿಂದ ಸಮಗ್ರ ವಿವರ ನೀಡುವಂತೆ ರಾಜ್ಯ ಸರಕಾರಕ್ಕೆ ಕೋರ್ಟ್ ಸಮನ್ಸ್ ಜಾರಿ ಮಾಡಿತ್ತು. ಇದೇ ವೇಳೆ, ತಮ್ಮ ಅಭಿಪ್ರಾಯ ತಿಳಿಸುವಂತೆ ಸಂತ್ರಸ್ತೆಯ ಕುಟುಂಬಕ್ಕೆ ಸೂಚನೆ ನೀಡಿತ್ತು. ಈಗಾಗಲೇ ಸೋಮವಾರ ಬೆಳಗ್ಗೆ ಪೊಲೀಸ್ ಬಿಗಿಭದ್ರತೆಯಲ್ಲಿ ಲಖನೌ ಪೀಠದ ಮುಂದೆ ಹಾಜರಾದ ಮೃತ ಯುವತಿಯ ತಂದೆ, ತಾಯಿ ಮತ್ತು ಮೂವರು ಸೋದರರು ಸಂಪೂರ್ಣ ವಿವರ ನೀಡಿದ್ದಾರೆ.