ಚಾಮರಾಜನಗರ, ನ. 12: ಕೊರೊನಾದಿಂದಾಗಿ ಅಂತಾರಾಜ್ಯ ತಮಿಳುನಾಡಿಗೆ ದೀರ್ಘಕಾಲದಿಂದ ಸ್ಥಗಿತಗೊಂಡಿದ್ದ ಸಾರಿಗೆ ಸೇವೆ ಗುರುವಾರದಿಂದ ಜಿಲ್ಲೆಯಲ್ಲಿ ಪ್ರಾರಂಭವಾಗಲಿದೆ. ದೀಪಾವಳಿ ಹಬ್ಬವನ್ನು ತಮಿಳುನಾಡಿನಲ್ಲಿ ಅದ್ಧೂರಿಯಾಗಿ ಆಚರಿಸುವ ಕಾರಣ ನ.11ರಿಂದ 16ರವರೆಗೆ ಕರ್ನಾಟಕದಿಂದ ಬಸ್‌ಗಳನ್ನು ತಾತ್ಕಾಲಿಕವಾಗಿ ಓಡಿಸಲು ಆದೇಶವಾಗಿದ್ದು, ಅದರಂತೆ ಬೆಂಗಳೂರಿನಿಂದ ಬುಧವಾರ ಸಂಜೆಯಿಂದಲೇ ಬಸ್ಸುಗಳು ಕಾರ್ಯಾಚರಣೆಗೆ ಇಳಿದಿವೆ.
ಮೈಸೂರಿನಿಂದ ತಮಿಳುನಾಡಿಗೆ ಹೋಗುವ ಬಸ್ಸುಗಳು ಚಾಮರಾಜನಗರದ ಮಾರ್ಗವಾಗಿ ಸಂಚರಿಸಲಿದ್ದು, ಪ್ರಯಾಣಿಕರ ಸಂಖ್ಯೆ ನೋಡಿ ಹೆಚ್ಚಿನ ಬಸ್ ವ್ಯವಸ್ಥೆ ಮಾಡಲಾಗುವುದು ಎಂದು ಚಾಮರಾಜನಗರ ಡಿಟಿಓ ಪರಮೇಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.
ಕೊಯಮತ್ತೂರು, ತಿರುಪೂರ್, ಈರೋಡ್, ಮಧುರೈಗೆ ನಗರದ ಮಾರ್ಗ ವೇ ಬಸ್ಸುಗಳು ಸಂಚರಿಸಲಿವೆ. ಸುಮಾರು ದಿನಗಳಿಂದ ಎಲ್ಲೆಕಟ್ಟೆ, ಪುಣ ಜನೂರು, ತಾಳವಾಡಿ ಗಡಿವರೆಗಷ್ಟೇ ಸಂಚರಿಸುತ್ತಿದ್ದ ಸಾರಿಗೆ ಬಸ್ಸುಗಳು ಗುರುವಾರದಿಂದ ಕೊಂಗಳ್ಳಿ ಬೆಟ್ಟ ಸೇರಿದಂತೆ ತಮಿಳುನಾಡಿನ ಭಾಗಕ್ಕೆ ಪ್ರಯಾಣ ಬೆಳಸಲಿವೆ ಎಂದು ಡಿಟಿಓ ಪರಮೇಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.
ಓಣಂ ಸಂದರ್ಭದಲ್ಲೇ ರಾಜ್ಯದಿಂದ ಕೇರಳಕ್ಕೆ ಬಸ್ಸುಗಳನ್ನು ಬಿಡಲಾಗಿದೆ. ಆ ರಾಜ್ಯದಿಂದಲೂ ಜಿಲ್ಲೆ ಸೇರಿದಂತೆ ಇತರೆಡೆಗೆ ಬಸ್ಸುಗಳು ಬರುತ್ತಿವೆ. ಕೇರಳಕ್ಕೆ ಹೋಗಿ ಬರುವವರು ಆನ್‌ಲೈನ್ ಬುಕ್ಕಿಂಗ್ ಸೇವೆಯನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಪ್ರಯಾಣಿಕರ ಕೊರತೆ ಕಾರಣ ಜಿಲ್ಲೆಯಿಂದ ಕೇರಳಕ್ಕೆ ಬಿಡಲಾಗಿದ್ದ ಸಾರಿಗೆ ಬಸ್‌ವೊಂದರ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.