ಹುಣಸೆ ಹಣ್ಣು ಗುಣದಲ್ಲಿ ಹುಳಿಯಾದರೂ ಇದರಿಂದಲೂ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಹಲವು ಬಗೆಯ ಪೌಷ್ಟಿಕಾಂಶಗಳು ಇದರಲ್ಲಿವೆ. ಬಹಳ ಹಿಂದಿನಿಂದಲೂ ಈ ಹುಣಸೆ ಹಣ್ಣು ಬಳಕೆಯಲ್ಲಿದೆ. ಅಡುಗೆ ಮನೆಯಲ್ಲಿ ಹುಳಿ ಇಲ್ಲದೆ ಅಡಿಗೆಯೇ ಇಲ್ಲ. ಇದರಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ‘E’ ಮತ್ತು ಹಲವು ಬಗೆಯ ಆಂಟೀ ಆಕ್ಸಿಡೆಂಟ್ ಗಳು ಅಡಕವಾಗಿವೆ. ಇದೊಂದು ನೈಸರ್ಗಿಕ ಆಹಾರ ಪದಾರ್ಥವಾಗಿದ್ದು ಬ್ಲೀಚಿಂಗ್ ಏಜೆಂಟ್ ಎಂಬುದು ನಮಗೆಲ್ಲರಿಗೂ ತಿಳಿದಿದೆ.
ಇದರಲ್ಲಿ ಯಾವುದೇ ರಾಸಾಯನಿಕಗಳು ಇಲ್ಲ, ಹಾಗೂ ಇದು ದುಬಾರಿಯೂ ಅಲ್ಲ. ಇದರಲ್ಲಿರುವ ಅದ್ಬುತ ಗುಣಗಳಿಂದ ದೇಹದ ಸೌಂದರ್ಯಕ್ಕೂ ಇದು ಉಪಯುಕ್ತವಾಗಿದೆ, ಬೊಜ್ಜನ್ನೂ ಕರಗಿಸುವ ಗುಣವನ್ನು ಇದು ಹೊಂದಿದೆ. ಚರ್ಮದ ತೇವಾಂಶವನ್ನು ಇದು ಕಾಪಾಡುತ್ತದೆ. ಚರ್ಮದಲ್ಲಿರುವ ಕೊಳಕನ್ನು ನಿವಾರಿಸುವಲ್ಲಿ ಇದು ಸಹಕಾರಿಯಾಗಿದೆ. ಮುಖಕ್ಕೆ ಹಚ್ಚುವ ಫೇಸ್ ಪ್ಯಾಕನ್ನು ಇದರಿಂದ ತಯಾರಿಸಿಕೊಳ್ಳಬಹುದಾಗಿದೆ.
ಒಂದು ಚಮಚ ಹುಣಸೆ ಹಣ್ಣಿನ ರಸಕ್ಕೆ 1 ಚಮಚ ಜೇನು ತುಪ್ಪವನ್ನು ಒಂದು ಚಮಚ ಕಡ್ಲೆ ಹಿಟ್ಟನ್ನು, 1 ಚಮಚ ನಿಂಬೆ ರಸವನ್ನು ಬೆರಸಿ ಮುಖ ಹಾಗೂ ಕುತ್ತಿಗೆ ಭಾಗಕ್ಕೆ ಹಚ್ಚಿಕೊಂಡು 15 ನಿಮಿಷಗಳ ಕಾಲ ಬಿಟ್ಟು ಮುಖವನ್ನು ತಣ್ಣೀರಿನಲ್ಲಿ ತೊಳೆದುಕೊಂಡರೆ ಮುಖದಲ್ಲಿ ಹೊಸ ಕಳೆ ಕಂಡುಬರುತ್ತದೆ.
ಮುಖದಲ್ಲಿ ಸುಕ್ಕುಗಳು ಕಂಡುಬಂದರೆ ಇದನ್ನು ಫೇಸ್ ಟೋನರ್ ಆಗಿಯೂ ಬಳಸಬಹುದು. ಒಂದು ಚಮಚ ಹುಣಸೆ ಹಣ್ಣಿನ ರಸಕ್ಕೆ ಒಂದು ಚಮಚ ಕಾಪಿ ಇಲ್ಲವೆ ಟೀ ಪುಡಿಯೊಂದಿಗೆ ಕುದಿಸಿ ಆರಿದ ಬಳಿಕ ಇದನ್ನು ಸುಕ್ಕು ಇರುವ ಕಡೆ ಹಚ್ಚಿಕೊಂಡು ಬಂದರೆ ಕ್ರಮೇಣ ಸುಕ್ಕು ನಿವಾರಣೆಯಾಗಿ ಪಳ ಪಳ ಹೊಳೆಯುವ ಕೋಮಲ ತ್ವಚೆಯು ನಿಮ್ಮದಾಗುತ್ತದೆ.
ಇದನ್ನು ಜ್ಯೂಸ್ ಮಾಡಲೂ ಬಳಸಬಹುದು . ಹುಣಸೆ ಹಣ್ಣನ್ನು ನೀರಲ್ಲಿ ಹಾಕಿ ಚೆನ್ನಾಗಿ ಕಿವುಚಿ ನೀರನ್ನು ಸೋಸಿ ಅದಕ್ಕೆ ಬೆಲ್ಲ ಇಲ್ಲವೇ ಸಕ್ಕರೆಯನ್ನು ಸೇರಿಸಿ ಕುಡಿಯುವುದರಿಂದ ಪಿತ್ತ ಶಮನಕ್ಕೂ ಇದು ಒಳ್ಳೆಯ ಪರಿಣಾಮವನ್ನು ಬೀರುತ್ತದೆ. ಚರ್ಮಕ್ಕೆ ಕಾಂತಿಯನ್ನು ನೀಡುತ್ತದೆ. ದೇಹಕ್ಕೆ ಆದ ಆಯಾಸವನ್ನೂ ಬಗೆ ಹರಿಸುತ್ತದೆ.